
ಬೆಂಗಳೂರು ಮೇ. ೨೬-ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ತಕ್ಷಣ ೫ ಗ್ಯಾರೆಂಟಿ ಯೋಜನೆ ಜಾರಿ ಮಾಡುವುದಾಗಿ ಹೇಳಿ ಇದುವರೆಗೂ ಜಾರಿ ಮಾಡಿಲ್ಲ. ಯಾರೂ ಕರೆಂಟ್ ಬಿಲ್ ಕಟ್ಟಬೇಡಿ, ಮಹಿಳೆಯರು ಟಿಕೆಟ್ ಪಡೆಯದೆ ಪ್ರಯಾಣಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಐದು ಗ್ಯಾರೆಂಟಿಗಳ ಭರವಸೆ ನೀಡಿ ಕುತಂತ್ರ ರಾಜಕಾರಣ ನಡೆಸಿ, ರಾಜ್ಯದ ಜನರನ್ನು ವಂಚಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ್ ಸ್ವಾಮಿ ಹೇಳಿದ್ದಾರೆ.ಜೆಡಿಎಸ್ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆಗೂ ಮುನ್ನ ಕಾಂಗ್ರೆಸ್ ನನಗೂ ಫ್ರೀ, ನಿನಗೂ ಫ್ರೀ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ ಈಗ ಷರತ್ತುಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಲ್ಲರಿಗೂ ೫ ಗ್ಯಾರೆಂಟಿ ಫ್ರೀ ಎಂದಿದ್ದ ಸಿದ್ದರಾಮಯ್ಯ ಮೊದಲ ಸಂಪುಟದಲ್ಲೇ ಗ್ಯಾರೆಂಟಿ ಜಾರಿ ಮಾಡುತ್ತೇವೆ. ಆದರೆ ಇದುವರೆಗೂ ಜಾರಿ ಮಾಡಿಲ್ಲ ಎಂದು ಕಿಡಿಕಾರಿದರು.ನೂತನ ಸಂಸತ್ ಭವನ ಉದ್ಘಾಟನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಂಸತ್ ಭವನ ಒಂದು ಪಕ್ಷಕ್ಕೆ, ವ್ಯಕ್ತಿಗೆ ಸೀಮಿತವಲ್ಲ. ದೇಶದ ತೆರಿಗೆ ಹಣದಿಂದ ನಿರ್ಮಿಸಲಾಗಿದೆ. ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಈ ವಿಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದರು.
ರಾಷ್ಟ್ರಪತಿ ದ್ರೌರ್ಪದಿ ಮುರ್ಮು ಆದಿವಾಸಿ ಮಹಿಳೆಯಾಗಿದ್ದು ಅವರನ್ನು ನೂತನ ಸಂಸತ್ ಭವನದ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂಬ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಿದೆ. ಆದರೆ ಯಾವುದೇ ಭವನ ಉದ್ಘಾಟನೆ ಸಂದರ್ಭದಲ್ಲಿ ರಾಷ್ಟ್ರಪತಿ ಇಲ್ಲವೇ ರಾಜ್ಯಪಾಲರನ್ನು ಆಹ್ವಾನಿಸಿದ ಉದಾಹರಣೆಗಳು ಇಲ್ಲ ಎಂದು ತಿರುಗೇಟು ನೀಡಿದರು.ಛತ್ತಿಸ್‌ಘಢ ವಿಧಾನಸಭೆ ಶಂಕು ಸ್ಥಾಪನೆಗೆ ಕಾಂಗ್ರೆಸ್ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿಯವರನ್ನು ಕರೆದಿದ್ದರೂ ರಾಜ್ಯಪಾಲರನ್ನು ಕರೆಸಿ ಅಡಿಗಲ್ಲು ಹಾಕಿಸಿರಲಿಲ್ಲ. ಕರ್ನಾಟಕದ ವಿಕಾಸಸೌಧವನ್ನು ಅಂದಿನ ಮುಖ್ಯಮಂತ್ರಿ ಉದ್ಘಾಟಿಸಿದ್ದರು. ಆದರೆ ಈಗ ನೂತನ ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್ ರಾಷ್ಟ್ರಪತಿ ಬಗ್ಗೆ ಮಾತನಾಡುತ್ತಿದೆ ಎಂದು ದೂರಿದರು.
ಸಿಎಂ ಇಬ್ರಾಹಿಂ ಮುಂದುವರಿಕೆ
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿ.ಎಂ ಇಬ್ರಾಹಿಂ ಮುಂದುವರೆಯಲಿದ್ದಾರೆ. ಅವರನ್ನೇ ಮುಂದುವರೆಯಿರಿ ಎಂದು ವರಿಷ್ಠರು ಹೇಳಿದ್ದಾರೆ. ಹಾಗಾಗಿ, ಅವರ ರಾಜೀನಾಮೆಯನ್ನು ಸ್ವೀಕರಿಸಿಲ್ಲ ಎಂದರು.
ಜೆಡಿಎಸ್ ಯುವ ಘಟಕಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ಬಗ್ಗೆರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ತೀರ್ಮಾನ ಮಾಡುತ್ತಾರೆ ಎಂದರು.