ಕೈ ಮೊದಲ ಪಟ್ಟಿಗೆ ಕೌಂಟ್‌ಡೌನ್

೧೨೦ ಅಭ್ಯರ್ಥಿ ಅಂತಿಮ
ಬೆಂಗಳೂರು,ಮಾ.೧೭:ಮುಂದಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಹೈ ಕಮಾಂಡ್ ಇಂದು ಅನುಮೋದನೆ ನೀಡಲಿದೆ. ದೆಹಲಿಯಲ್ಲಿಂದು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯವಿಧಾನಸಭೆಗೆ ೧೨೦ ಅಭ್ಯರ್ಥಿಗಳ ಮೊದಲ ಪಟ್ಟಿಗೊಳಿಸಲಿದೆ.
ಇಂದು ರಾತ್ರಿಯೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇಂದು ಮಧ್ಯಾಹ್ನ ೩ ಗಂಟೆಗೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್‌ನ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ೧೨೦ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಎಐಸಿಸಿ ಮಟ್ಟದ ಸ್ಕ್ರೀನಿಂಗ್ ಸಮಿತಿ ಈಗಾಗಲೇ ಬೆಂಗಳೂರಿನಲ್ಲಿ ಹಲವು ಸಭೆ ನಡೆಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದು, ಈ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿ ಪರಿಶೀಲಿಸಿ ಅಂತಿಮವಾಗಿ ಯಾರಿಗೆ ಟಿಕೆಟ್ ಎಂಬುದನ್ನು ನಿರ್ಧಾರ ಮಾಡಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಪ್ರಮುಖ ಮುಖಂಡರುಗಳು ಸಹ ಸಭೆ ನಡೆಸಿ ಯಾವ ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭ ಎಂಬ ಬಗ್ಗೆ ವರಿಷ್ಠರಿಗೆ ವರದಿ ನೀಡಿದ್ದು, ಈ ವರದಿಯನ್ನಾಧರಿಸಿ ಕಾಂಗ್ರೆಸ್ ವರಿಷ್ಠರು ಮೊದಲ ಪಟ್ಟಿಗೆ ಇಂದು ಅಂಕಿತ ಹಾಕುವರು.
ಎಲ್ಲ ಹಾಲಿ ಶಾಸಕರಿಗೂ ಟಿಕೆಟ್’ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಬಹುತೇಕ ಎಲ್ಲ ಹಾಲಿ ಶಾಸಕರಿಗೂ ಟಿಕೆಟ್ ನೀಡುವುದು ಬಹುತೇಕ ಖಚಿತ. ಇದರ ಜತೆಗೆ ಪೈಪೋಟಿ ಇಲ್ಲದ ೫೦ಕ್ಕೂ ಹೆಚ್ಚು ಕ್ಷೇತ್ರದ ಟಿಕೆಟ್‌ನ್ನು ಇಂದೇ ಅಂತಿಮಗೊಳಿಸಲಾಗುತ್ತದೆ.
ಸುಮಾರು ೫೦ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ೨-೩ ಅಭ್ಯರ್ಥಿಗಳು ಪೈಪೋಟಿ ನಡೆಸಿದ್ದು, ಇಲ್ಲಿ ಅಭ್ಯರ್ಥಿಗಳ ಜತೆ ಚರ್ಚಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಂತರ ಈ ಕ್ಷೇತ್ರಗಳಿಗೆ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತದೆ.
ನಾಯಕರುಗಳು ದೆಹಲಿಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಇಂದು ಮಧ್ಯಾಹ್ನ ದೆಹಲಿಯಲ್ಲಿ ನಡೆಯುವ ಕೇಂದ್ರ ಚುನಾವಣಾ ಸಮಿತಿಯಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಬೆಂಗಳೂರಿನಿಂದ ದೆಹಲಿಗೆ ತೆರಳಿದರು.
ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಲವು ಸಚಿವರು, ಶಾಸಕರುಗಳು ಈಗಾಗಲೇ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಇಂದು ಬೆಳಿಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಹಾಗೆಯೇ ನಿನ್ನೆ-ಮೊನ್ನೆ ಹಲವು ನಾಯಕರುಗಳು ಖರ್ಗೆ ಅವರನ್ನು ಭೇಟಿ ಮಾಡಿ ಟಿಕೆಟ್‌ಗಾಗಿ ಮನವಿ ಮಾಡಿದ್ದರು.