ಕೈ ಮೇಲೆ ಸಿಟ್ಟಿಲ್ಲ:ಬಿಜೆಪಿ ಸೇರಲು ತೊಂದರೆಯಿಲ್ಲ

ರಾಯರೆಡ್ಡಿ ಅಚ್ಚರಿ ಹೇಳಿಕೆ

ಧಾರವಾಡ,ಸೆ.೪: ನಾನು ಕಾಂಗ್ರೆಸ್ ಮೇಲೆ ಸಿಟ್ಟಾಗಿಲ್ಲ. ಬಿಜೆಪಿಗೆ ಹೋಗಲು ಯಾವುದೇ ತೊಂದರೆಯೂ ಇಲ್ಲ ಎಂದು ಶಾಸಕ ಬಸವರಾಜ ರಾಯರೆಡ್ಡಿ ಮಾರ್ಮಿಕವಾಗಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಹೋಗಲು ನನಗೆ ಯಾವುದೇ ತೊಂದರೆ ಇಲ್ಲ ಆದರೆ, ಆ ಪಕ್ಷದ ತತ್ವ ಸಿದ್ಧಾಂತಗಳು ನನಗೆ ಸರಿ ಹೊಂದುವುದಿಲ್ಲ. ನಾನು ಕಾಂಗ್ರೆಸ್ ಬಿಡುವುದಿಲ್ಲ ಎಂದು ನುಡಿದರು.
ನಾನು ವೈಚಾರಿಕತೆ ಇಟ್ಟುಕೊಂಡು ರಾಜಕೀಯ ಮಾಡಿದವನು. ಸಿದ್ದರಾಮಯ್ಯ ಒಳ್ಳೆಯ ಸಿಎಂ. ಅವರೊಬ್ಬ ಒಳ್ಳೆಯ ಜನನಾಯಕ. ಸಿದ್ದರಾಮಯ್ಯನಂತಹ ರಾಜಕಾರಣಿಗಳು ಸಿಗುವುದಿಲ್ಲ. ನಾವೆಲ್ಲ ಒಮ್ಮೆಯೇ ರಾಜಕೀಯಕ್ಕೆ ಬಂದವರು ಎಂದವರು ಹೇಳಿದರು.
ಕೊಪ್ಪಳದ ಕೆಲ ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಇಂದು ಇಬ್ಬರು ಸಚಿವರನ್ನು ನಾನೇ ನನ್ನ ಫಾರ್ಮ್‌ಹೌಸ್‌ಗೆ ಕರೆದಿದ್ದೆ. ನನ್ನ ಕ್ಷೇತ್ರಕ್ಕೆ ವೀಕ್ಷಣೆಗೆ ಇಬ್ಬರನ್ನೂ ಕರೆದುಕೊಂಡು ಹೋಗುತ್ತೇನೆ. ಹೀಗಾಗಿ ನನ್ನ ಫಾರ್ಮ್‌ಹೌಸ್‌ನಲ್ಲಿ ಅವರು ವಸತಿ ಮಾಡಿದ್ದರು ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕೀಯ ಮಾಡುವಾಗ ಖಂಡಿತ ಮಾಡೇ ಮಾಡುತ್ತೇವೆ. ಅಭಿವೃದ್ಧಿ ದೃಷ್ಟಿಯಿಂದ ನಾವು ಇಲ್ಲಿ ಸೇರಿದ್ದೇವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಅದೃಷ್ಟ ಇದ್ದಾಗ ಯಾರು ಬೇಕಾದರೂ ಏನಾದರೂ ಆಗಬಹುದು. ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಅಸಮಾಧಾನ ಇಲ್ಲ. ಆದರೆ, ನಮ್ಮನ್ನು ಉಪಯೋಗಿಸಿಕೊಳ್ಳುತ್ತಿಲ್ಲವಲ್ಲ ಎಂಬ ಬೇಸರ ಇದೆ ಅಷ್ಟೆ, ಎಂದು ರಾಯರೆಡ್ಡಿ ಹೇಳಿದರು.
ನಾನು ಸಿಎಂಗೆ ಪತ್ರ ಬರೆದಿದ್ದು ನಿಜ. ಕೊಪ್ಪಳ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಈ ಸಮಯದಲ್ಲಿ ವಿದ್ಯುತ್ ಸರಿಯಾಗಿ ಸಿಗುತ್ತಿಲ್ಲ. ಟ್ರಾನ್ಸ್‌ಫಾರ್ಮರಗಳು ಸುಡುತ್ತಿವೆ. ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಕಲಬುರ್ಗಿ ಜೆಸ್ಕಾಂ ವ್ಯಾಪ್ತಿಗೆ ನಮ್ಮ ಜಿಲ್ಲೆ ಬರುತ್ತದೆ. ಆದರೆ, ಅಧಿಕಾರಿಗಳು ಜಿಲ್ಲೆಗೆ ಬರುತ್ತಿಲ್ಲ. ಹೀಗಾಗಿ, ಸಿಎಂಗೆ ಪತ್ರ ಬರೆದಿದ್ದೇನೆ. ಜನರಿಗೆ ಗೊತ್ತಾಗಲಿ ಎಂದು ಆ ಪತ್ರವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದೆ. ನಾಳೆ ದಿ. ೫ ರಂದು ಇಂಧನ ಸಚಿವರು ಸಭೆ ಕರೆದಿದ್ದಾರೆ. ನನ್ನ ಪತ್ರದಿಂದ ಜೆಸ್ಕಾಂ ಸಮಸ್ಯೆ ಪರಿಹಾರ ಆಗುತ್ತದೆ ಎಂಬ ಭರವಸೆಯಿದೆ ಎಂದು ಅವರು ಹೇಳಿದರು,