ಕೈ ಮತ್ತು ತೆನೆ ಮೈತ್ರಿಗೆ ತೆರೆ ಬೀಳುವ ಸಾಧ್ಯತೆ

ಮೈಸೂರು:ಜ:10: ಮಹಾನಗರ ಪಾಲಿಕೆಯಲ್ಲಿ ಜಾ.ದಳ-ಬಿಜೆಪಿ ಮೈತ್ರಿ ಹುಸಿಯಾಗುವ ಸಾಧ್ಯತೆ ದಟ್ಟೈಸಿದೆ. ಕಾಂಗ್ರೆಸ್-ಬಿಜೆಪಿ ಸಹವಾಸ ಸಾಕು ಎನ್ನುತ್ತಿರುವ ಪಾಲಿಕೆಯ ಜಾ.ದಳ ಸದಸ್ಯರು, ವಿರೋಧ ಪಕ್ಷದಲ್ಲೇ ಕೂರುವ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಜಾ.ದಳ-ಬಿಜೆಪಿ ಮೈತ್ರಿಗೆ ತೆರೆಬೀಳುವ ಸಾಧ್ಯತೆಯಿದೆ.
ಜಾ.ದಳ ಸದಸ್ಯರೊಂದಿಗೆ ಎರಡನೇ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಶಾಸಕ ಸಾ.ರಾ.ಮಹೇಶ್, ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧ ಎನ್ನುತ್ತಿದ್ದಾರೆ ನಮ್ಮ ಸದಸ್ಯರು. ಈ ವಿಚಾರವನ್ನು ವರಿಷ್ಠರ ಗಮನಕ್ಕೆ ತಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಾವು ಕಾಂಗ್ರೆಸ್-ಜಾ.ದಳ ನಡುವಿನ ಮೈತ್ರಿ ಬಗ್ಗೆ ಯಾವುದೇ ಮಾತುಕತೆ ಆಡಿಲ್ಲ. ಕಾಂಗ್ರೆಸ್‍ನ ತನ್ವೀರ್ ಸೇಠ್, ಬಿಜೆಪಿ ಪ್ರತಾಪಸಿಂಹ, ಎಸ್.ರಾಮದಾಸ್, ಎಚ್.ವಿ.ರಾಜೀವ್ ಕೂಡ ನನ್ನೊಂದಿಗೆ ಮಾತನಾಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ಅವರವರ ಅಭಿಪ್ರಾಯ ತಿಳಿಸಿದ್ದಾರೆ. ಈ ಬಗ್ಗೆ ರಾಜ್ಯ ನಾಯಕರೊಟ್ಟಿಗೆ ಚರ್ಚಿಸಿ ನಂತರ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.
ಸದ್ಯಕ್ಕೆ ಕಾಂಗ್ರೆಸ್, ಬಿಜೆಪಿ ಸಹವಾಸ ಸಾಕಾಗಿದೆ. ಆದ್ದರಿಂದ, ವಿರೋಧ ಪಕ್ಷವಾಗಿಯೇ ಇರುವುದೇ ಒಳ್ಳೆಯದು ಎಂಬುದು ನಮ್ಮ ಸದಸ್ಯರ ಅಭಿಪ್ರಾಯ. ದಿನಾಂಕ ಮತ್ತು ಮೀಸಲಾತಿ ಪ್ರಕಟವಾದ ಮೇಲೆ ಮುಂದಿನ ನಿರ್ಧಾರ ಎಂದರು.