
ಕೆ.ಆರ್. ಪುರ,ಮಾ.೬- ದೇಶ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರದ ಹುಟ್ಟು ಹಾಕಿದ್ದು ಕಾಂಗ್ರೆಸ್ ಪಕ್ಷದವರು. ಈಗ ಬಿಜೆಪಿ ಪಕ್ಷದ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದರು.
ಮಹದೇವಪುರ ಕ್ಷೇತ್ರದ ಕುಂದಲಹಳ್ಳಿ ಸಮೀಪ ಮೈದಾನದಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ ಮಹಿಳಾ ಸಮಾವೇಶದಲ್ಲಿ ಉದ್ಘಾಟಿಸಿ ಮಾತನಾಡಿದರು.
ಯುಪಿಎ ಆಡಳಿತ ಅವಧಿಯಲ್ಲಿ ಒಂದೆರಡಲ್ಲ ಬರೋಬ್ಬರಿ ೧೨ ಲಕ್ಷ ಕೋಟಿ ಹಗರಣ ನಡೆದಿವೆ. ಈಗ ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ರಷ್ಟೆ ಸತ್ಯ. ಕಾಂಗ್ರೆಸ್ ಪಕ್ಷದ ಸುಳ್ಳು ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಶಾಸಕ ಅರವಿಂದ ಲಿಂಬಾವಳಿ ಅವರು ಮಾತನಾಡಿ ಬಿಜೆಪಿ ಪಕ್ಷವು ತಳಮಟ್ಟದಿಂದಲೂ ಪ್ರಬಲ ಮಹಿಳಾ ಕಾರ್ಯಕರ್ತರನ್ನು ಹೊಂದಿದೆ, ಮಾತೆಯರ ಹಾಗೂ ಹೆಣ್ಣುಮಕ್ಕಳ ಪರ ಅನೇಕ ಯೋಜನೆಗಳನ್ನು ರೂಪಿಸಿರುವ ನಮ್ಮ ಸರಕಾರಕ್ಕೆ ಮಾತೆಯರ ಆಶೀರ್ವಾದವಿದೆ.
ಜನಪರ ಆಡಳಿತ ನಡೆಸಿರುವ ರಾಜ್ಯ ಸರ್ಕಾರವು ಮತ್ತೊಮ್ಮೆ ಆರಿಸಿ ಬರಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.
ನಮ್ಮ ಡಬಲ್ ಇಂಜಿನ್ ಸರ್ಕಾರವು ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಪ್ರಾಮಾಣಿಕವಾಗಿ ಜನರಿಗೆ ತಿಳಿಸುವ ಕೆಲಸ ಮಾಡಿದ್ದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸದ ಪಿ.ಸಿ. ಮೋಹನ್, ಬಿಜೆಪಿ ರಾಜ್ಯ ಮಹಿಳಾ ಅಧ್ಯಕ್ಷೆ ಗೀತಾ ವಿವೇಕಾನಂದ,ಶಾಸಕಿ ಪೂರ್ಣಿಮಾ ಶ್ರೀನಿವಾಸ್, ರಾಜ್ಯ ವಕ್ತಾರರಾದ ಮಾಳವಿಕಾ ಅವಿನಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಮಂಜುನಾಥ್, ನಗರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾಗೊವಿಂದ್, ಕ್ಷೇತ್ರ ಮಹಿಳಾ ಅಧ್ಯಕ್ಷರಾದ ಪುಷ್ಪಾ ಮಂಜುನಾಥ್, ಮಮತಾ ತಮ್ಮೇಶ್,ಮಂಡಲದ ಅಧ್ಯಕ್ಷ ರಾದ ಮನೋಹರ್ ರೆಡ್ಡಿ, ನಟರಾಜ್, ಮುಖಂಡರಾದ ಮಹೇಂದ್ರ ಮೋದಿ ಇದ್ದರು.