ಕೈ ಪ್ರಣಾಳಿಕೆಗೆ ಈಶ್ವರಪ್ಪ ಬೆಂಕಿ

ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪರವರು ಕಲಬುರ್ಗಿಯಲ್ಲಿಂದು ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿ ಹಚ್ಚಿ ಸುಟ್ಟರು.

ಬೆಂಗಳೂರು,ಮೇ ೪:ಬಜರಂಗ ದಳವನ್ನು ನಿಷೇಧಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿರುವ ಪ್ರಸ್ತಾಪ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು, ಇಂದು ಮಾಜಿ ಸಚಿವ ಈಶ್ವರಪ್ಪ ಅವರು ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿ ಹಚ್ಚುವ ಮೂಲಕ ಸಂಘರ್ಷ ತಾರಕಕ್ಕೇರಿದೆ.
ಬಜರಂಗದಳ ನಿಷೇಧದ ಕಾಂಗ್ರೆಸ್ ಭರವಸೆಯನ್ನು ವಿರೋಧಿಸಿ ಇಂದು ರಾತ್ರಿ ೭ ಗಂಟೆಗೆ ಬಜರಂಗದಳದವರು ರಾಜ್ಯಾದ್ಯಂತ ರಾಮ ಮತ್ತು ಆಂಜನೇಯ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸ್ ಪಠಣವನ್ನು ನಡೆಸಲಿದ್ದು, ಇದರ ನಡುವೆಯೇ ಇಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಲಬುರ್ಗಿಯಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್‌ನ ಪ್ರಣಾಳಿಕೆಯ ಪ್ರತಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವುದು ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಮಲ್ಲಿಕಾರ್ಜುನ ಖರ್ಗೆ ಆಕ್ರೋಶ
ಮಾಜಿ ಸಚಿವ ಈಶ್ವರಪ್ಪರವರು ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿ ಇಟ್ಟಿರುವುದಕ್ಕೆ ಕಾಂಗ್ರೆಸ್ ನಾಯಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಣಾಳಿಕೆ ಪ್ರತಿ ಸುಟ್ಟು ಈಶ್ವರಪ್ಪರವರು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆಂದು ಎಐಸಿಸಿ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದಿದ್ದಾರೆ. ಈ ಮೂಲಕ ಜನರಿಗೆ ನೀಡಿದ ಗ್ಯಾರೆಂಟಿ ಯೋಜನೆಗಳನ್ನು ಈಶ್ವರಪ್ಪ ಸುಟ್ಟು ಹಾಕಿದ್ದಾರೆ. ಈ ರೀತಿಯ ಘಟನೆಗಳು ನಡೆಯಬಾರದು. ನಮ್ಮ ಹಿಂದುತ್ವವೇ ಬೇರೆ, ಬಿಜೆಪಿಯವರ ಹಿಂದುತ್ವವವೇ ಬೇರೆ, ನಾನೂ ಹಿಂದೂ, ಅವರು ಕೂಡ ಹಿಂದೂ ಎಂದು ಖರ್ಗೆ ಅವರು ಕಲಬುರ್ಗಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಏನಿದು ಘಟನೆ?
ಕಲಬುರ್ಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪರವರು ಈ ಪ್ರಣಾಳಿಕೆ ಮೊಹ್ಮದ್‌ಅಲಿ ಜಿನ್ನಾ ಪ್ರಣಾಳಿಕೆ ಎಂದು ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿ ಹಚ್ಚಿ ಕಾಂಗ್ರೆಸ್‌ನವರು ಬಜರಂಗದಳ ನಿಷೇಧದ ಪ್ರಸ್ತಾವವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಬಜರಂಗದಳ ರಾಷ್ಟ್ರ ಪ್ರೇಮಿ ಸಂಘಟನೆ, ಇದನ್ನು ಕಾಂಗ್ರೆಸ್‌ನವರು ಮುಟ್ಟಿದರೆ ಸುಟ್ಟು ಹೋಗುತ್ತಾರೆ. ಆಂಜನೇಯನ ಬಾಲಕ್ಕೆ ರಾವಣ ಬೆಂಕಿ ಇಟ್ಟ, ಆತನ ಅಂತ್ಯವೇ ಆಯಿತು. ಕಾಂಗ್ರೆಸ್ ವಿಪಕ್ಷ ಸ್ಥಾನ ಪಡೆಯುವಷ್ಟು ಸೀಟುಗಳನ್ನು ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.
ಇಂದು ವಾಗ್ದಾಳಿ
ಕಾಂಗ್ರೆಸ್‌ನ ಬಜರಂಗದಳ ನಿಷೇಧದ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ ಮುಂದುವರೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಬಜರಂಗ ದಳಕ್ಕೂ ಹನುಮನಿಗೂ ಏನು ಸಂಬಂಧವೆಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಹುಬ್ಬಳ್ಳಿಯಲ್ಲಿಂದು ತಿರುಗೇಟು ನೀಡಿ, ರಾಮನಿಗೂ ಹನುಮನಿಗೂ ಯಾವ ರೀತಿ ಸಂಬಂಧವಿದೆಯೋ ಅದೇ ರೀತಿ ಹನುಮನಿಗೂ ಬಜರಂಗದಳಕ್ಕೂ ಇದೆ ಎಂದು ತಿರುಗೇಟು ನೀಡಿ ಕಾಂಗ್ರೆಸ್ ಪಕ್ಷ ಮೊದಲು ಇದನ್ನು ಅರ್ಥ ಮಾಡಿಕೊಳ್ಳಲಿಎಂದು ಹೇಳಿದ್ದಾರೆ.
ಏನಿದು ಸಂಘರ್ಷ-ವಿವಾದ?
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧಿಸುವುದಾಗಿ ಹೇಳಿದ ಬೆನ್ನಲ್ಲೆ ಪ್ರಧಾನಿ ಮೋದಿಯವರಿಂದ ಹಿಡಿದು ಎಲ್ಲ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದರು. ಈ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ, ಆರೋಪ-ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿತ್ತು.
ಬಿಜೆಪಿ ನಾಯಕರು ಕಾಂಗ್ರೆಸ್‌ನ ಬಜರಂಗ ದಳ ನಿಷೇಧದ ಅಸ್ತ್ರವನ್ನು ಬಳಸಿಕೊಂಡು ಸಾರ್ವಜನಿಕ ಸಭೆಗಳಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಿನ್ನೆ ಮತ್ತು ಮೊನ್ನೆ ಪ್ರಧಾನಿ ಮೋದಿ ಅವರೂ ಸಹ ಸಾರ್ವಜನಿಕ ಸಭೆಗಳಲ್ಲಿ ಬಜರಂಗಬಲಿಕೀ ಜೈ ಎಂಬ ಘೋಷಣೆಗಳನ್ನು ಹಾಕಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಬಜರಂಗ ದಳ ನಿಷೇಧವನ್ನು ಮುಂದಿಟ್ಟು ಕಾಂಗ್ರೆಸ್ ವಿರುದ್ಧ ಕಿಡಿಕಾರಿ, ಹಿಂದುತ್ವದ ವಿಚಾರವನ್ನು ಮತ್ತೆ ಚುನಾವಣೆ ಪ್ರಚಾರಗಳಲ್ಲಿ ಮುನ್ನಲ್ಲೆಗೆ ತಂದಿದ್ದರು.
ಇಷ್ಟಾದರೂ ಕಾಂಹಗ್ರೆಸ್ ಪಕ್ಷ ಮಾತ್ರ ಯಾವುದಕ್ಕೂ ಎದೆ ಗುಂದದೆ ಬಿಜೆಪಿ ನಾಯಕರಿಗೆ ಎದಿರೇಟು ನೀಡಿ, ಬಜರಂಗದಳ ನಿಷೇಧದದ ಪ್ರಸ್ತಾವವನ್ನು ಸಮರ್ಥಿಸಿಕೊಂಡು ಬಜರಂಗ ದಳಕ್ಕೂ ಹನುಮನಿಗೂ ಯಾವುದೇ ಸಂಬಂಧವಿಲ್ಲ ನಾವೂ ಕೂಡ ಹನುಮನ ಭಕ್ತರೇ, ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಹನುಮಾನ್ ಚಾಲಿಸ್ ಪಠಿಸುತ್ತಿದ್ದಾರೆ. ನಾವು ನಿತ್ಯವೂ ಪಠಿಸುತ್ತೇವೆ. ಬಜರಂಗದಳ ನಿಷೇಧದ ಪ್ರಸ್ತಾವವನ್ನು ವಾಪಸ್ ಪಡೆಯಲ್ಲ. ನಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗೆ ಬದ್ಧ ಎಂದೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದರು. ಹಾಗೆಯೇ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಸಹ ಬಜರಂಗದಳ ನಿಷೇಧದ ಪ್ರಸ್ತಾವವನ್ನು ಸಮರ್ಥಿಸಿಕೊಂಡು ಬಜರಂಗ ದಳಕ್ಕೂ ಆಂಜನೇಯನಿಗೂ ಸಂಬಂಧವಿಲ್ಲ. ಬಿಜೆಪಿಯವರು ಕಳೆದ ೪ ವರ್ಷಗಳಲ್ಲಿ ೧,೫೦೦ಕ್ಕೂ ಹೆಚ್ಚು ದೇವಾಲಯಗಳನ್ನು ಕೆಡವಿದೆ. ನಂಜನಗೂಡಿನಲ್ಲಿ ಸಾವಿರ ವರ್ಷ ಇತಿಹಾಸದ ಹನುಮ ದೇವಾಲಯವನ್ನು ಕೆಡವಲಾಗಿದೆ. ಇದರ ವಿರುದ್ಧ ವಿಹೆಚ್‌ಪಿ ಬಜರಂಗದಳ ಏಕೆ ವಿರೋಧಿಸಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಮೆಟ್ರೊಗಾಗಿ ೧೫೦ ವರ್ಷದ ಹಳೆಯ ಹನುಮಂತನ ದೇವಾಲಯವನ್ನು ಕೆಡವಲಾಗಿತ್ತು. ರಾಜಕೀಯ ಕಾರಣಕ್ಕಾಗಿ ಬಿಜೆಪಿಯವರು ಬಜರಂಗದಳ ನಿಷೇಧದ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದರು.