ಕೈ ನಿಂದ ಅಲ್ಪಸಂಖ್ಯಾತರ ಉದ್ಧಾರವಿಲ್ಲ

ಬೆಂಗಳೂರು: ನ.೧೭- ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಉದ್ಧಾರ ಮಾಡಿಲ್ಲ. ಬದಲಾಗಿ ಅವರನ್ನು ಬಳಸಿ ಬಿಸಾಡುವ ರೀತಿಯಲ್ಲಿ ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಅಲ್ಪಸಂಖ್ಯಾತರು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಪತ್ರಕರ್ತರ ಜೊತೆ ಮಾತನಾಡಿದಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ರಾಜ್ಯದ ಅಧ್ಯಕ್ಷರ ಪದಗ್ರಹಣ ಸಂದರ್ಭದಲ್ಲಿ ಶಾಸಕ ಜಮೀರ್ ಅಹ್ಮದ್ ಅವರನ್ನು ವೇದಿಕೆಯಿಂದ ಕೆಳಗಿಳಿಸಿದ ದೊಡ್ಡ ಘಟನೆ ನಡೆದಿದೆ. ಕುಟುಂಬದ ಪಕ್ಷ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯರ ಬೆಂಬಲಿಗರನ್ನು ನೂರಕ್ಕೆ ನೂರು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ. ಜಮೀರ್ ಅಹ್ಮದ್ ಮತ್ತು ಇತರ ಮುಸ್ಲಿಮರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಸರ್ಕಾರವು ಮುಸ್ಲಿಮರಿಗಾಗಿ ಅನೇಕ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಿದೆ. ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರು ದೂರವಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
.ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲೂ ಹಿಂದೂ- ಮುಸ್ಲಿಂ ಗಲಭೆಗಳು ಆಗಿಲ್ಲ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕಾಂಗ್ರೆಸ್‌ನವರು ಎಲ್ಲೋ ಒಂದು ಕಡೆ ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟಿದ್ದರಿಂದ ಸಣ್ಣಪುಟ್ಟ ಘಟನೆಗಳು ಆಗಿವೆ. ಗಂಭೀರವಾದ ಗಲಭೆ ಆಗಿಲ್ಲ ಎಂದರು.
ಇಮ್ರಾನ್ ಪಾಷಾ ಅವರು ನಿನ್ನೆ ನಾನು ಟಿಪ್ಪು ಸುಲ್ತಾನ್ ವಂಶಸ್ಥರು, ತಲೆ ತೆಗೆಯಲೂ ಸಿದ್ಧ ಎಂದು ಹೇಳಿದ್ದು, ಅದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಇದು ಪಾಕಿಸ್ಥಾನ ಅಲ್ಲ; ತಾಲಿಬಾನ್ ಅಲ್ಲ. ಇದು ಭಾರತ.
ಇಲ್ಲಿ ಆಟವಾಡಲು ಬಂದರೆ ನಮಗೂ ಗೊತ್ತಿದೆ. ಅವರು ಹಿಂದೂಗಳ ಬೇಷರತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಬಿಟ್ ಕಾಯಿನ್ ಪ್ರಕರಣ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಆಗಿದೆ. ಕಾಂಗ್ರೆಸ್ ಶಾಸಕರ ಮಕ್ಕಳು ಇದರಲ್ಲಿ ಭಾಗಿಯಾಗಿದ್ದಾರೆ. ನೀವು ಆಗಲೇ ಕ್ರಮ ಕೈಗೊಳ್ಳಬೇಕಿತ್ತಲ್ಲವೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಬಿಟ್ ಕಾಯಿನ್ ಕುರಿತ ದಾಖಲೆ ಬಿಡುಗಡೆ ಮಾಡಿ, ಅಧಿವೇಶನದಲ್ಲಿ ಚರ್ಚೆಗೆ ಬನ್ನಿ ಎಂದು ಸವಾಲೆಸೆದರು. ದೇಶ- ರಾಜ್ಯವನ್ನು ಲೂಟಿ ಹೊಡೆದ ಕಾಂಗ್ರೆಸ್ಸಿಗರ ನಿಜ ಬಣ್ಣ ಬಯಲು ಮಾಡಲು ಬಿಜೆಪಿ ಸಿದ್ಧವಿದೆ ಎಂದು ನುಡಿದರು.
ಸಿದ್ದರಾಮಯ್ಯ, ಪ್ರಿಯಾಂಕ್, ಸುರ್ಜೇವಾಲಾ ಅವರ ಬುಟ್ಟಿಯಲ್ಲಿ ಹಾವಿಲ್ಲ. ಸುಮ್ಮನೆ ಹೆದರಿಸಲು ನೋಡುತ್ತಿದ್ದಾರೆ ಎಂದು ಅವರು ತಿಳಿಸಿದರು.