ಕೈ ನಾಯಕ ಖೇರ್ ಬಂಧನ

ನವದೆಹಲಿ,ಫೆ.೨೩:ಅದಾನಿ ಹಿಂಡೆನ್‌ಬರ್ಗ್ ವಿವಾದಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ತನಿಖೆಗೆ ಒತ್ತಾಯಿಸುವ ವೇಳೆ ಪ್ರಧಾನಿ ನರೇಂದ್ರಮೋದಿ ಅವರ ಹೆಸರನ್ನು ನರೇಂದ್ರ ಗೌತಮ್‌ದಾಸ್ ಕ್ಷಮಿಸಿ, ದಾಮೋದರದಾಸ್ ಎಂದು ಉಲ್ಲೇಖಿಸಿದ್ದ ಕಾಂಗ್ರೆಸ್ ನಾಯಕ ಪವನ್‌ಖೇರಾ ಅವರನ್ನು ಅಸ್ಸಾಂ ಪೊಲೀಸರು ದೆಹಲಿ ವಿಮಾನನಿಲ್ದಾಣದಲ್ಲಿ ಬಂಧಿಸಿದ್ದಾರೆ.ಕಾಂಗ್ರೆಸ್ ನಾಯಕ ಪವನ್‌ಖೇರಾ ಅವರು ದೆಹಲಿಯಿಂದ ಛತ್ತೀಸ್‌ಘಡ ರಾಜಧಾನಿ ರಾಯಪುರಕ್ಕೆ ಇಂಡಿಗೋ ಏರ್‌ಲೈನ್ಸ್ ಮೂಲಕ ಪ್ರಯಾಣಿಸಲು ಮುಂದಾದ ಮೇಲೆ ಅವರ ಪ್ರಯಾಣವನ್ನು ತಡೆಹಿಡಿಯುವುದರೊಂದಿಗೆ ಅವರನ್ನು ವಿಮಾನದಿಂದ ಕೆಳಗಿಳಿಸಿ ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ಅಂದಾಜು ೫೦ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಪವನ್‌ಖೇರ್ ಬಂಧನ ಖಂಡಿಸಿ ವಿಮಾನನಿಲ್ದಾಣದಲ್ಲಿಯೇ ಪ್ರತಿಭಟನೆ ನಡೆಸಿ ಖೇರಾ ಬಂಧನನ್ನು ತೀವ್ರವಾಗಿ ಖಂಡಿಸಿದ್ದಾರೆ.ಈ ಎಲ್ಲ ನಾಯಕರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆಗಾಗಿ ರಾಯಪುರಕ್ಕೆ ಪವನ್ ಖೇರ್ ಅವರೊಂದಿಗೆ ಪ್ರಯಾಣಿಸುತ್ತಿದ್ದರೆನ್ನಲಾಗಿದ್ದು, ಖೇರ್ ಅವರ ಬಂಧನದ ನಂತರ ವಿಮಾನದ ಪಕ್ಕದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.ಈ ಪ್ರತಿಭಟನೆಯಿಂದ ವಿಮಾನಗಳ ಹಾರಾಟದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಹಾಗೂ ಪ್ರಯಾಣದ ವೇಳೆ ವ್ಯತಿರಿಕ್ತ ಪರಿಣಾಮ ಆಗಿಲ್ಲ ಎಂದು ಇಂಡಿಗೋ ಏರ್‌ಲೈನ್ ಮೂಲಗಳು ತಿಳಿಸಿವೆ.ಪವನ್‌ಖೇರಾ ರಾಯಪುರಕ್ಕೆ ತೆರಳಲು ಇಂಡಿಗೋ ವಿಮಾನದಲ್ಲಿ ಕುಳಿತಿದ್ದ ವೇಳೆ ಬ್ಯಾಗೇಜ್‌ನಲ್ಲಿ ಸಮಸ್ಯೆ ಇರುವುದಾಗಿ ಹೇಳಲಾಗಿದೆ. ಆದರೆ, ಪವನ್ ನನ್ನ ಬಳಿ ಕೆಲವೇ ಸಾಮಾನುಗಳು ಮಾತ್ರ ಇವೆ ಎಂದು ತಿಳಿಸಿದ ನಂತರ ಪೊಲೀಸ್ ಉಪ ಆಯುಕ್ತರು ನಿಮ್ಮನ್ನು ಭೇಟಿ ಮಾಡಲು ಬಂದಿರುವುದಾಗಿ ವಿಮಾನ ಸಿಬ್ಬಂದಿಗಳು ತಿಳಿಸಿದ್ದಾರೆ.ಖೇರ್ ಅವರ ಜತೆಗಿದ್ದ ಕಾಂಗ್ರೆಸ್ ನಾಯಕರು ಬಂಧನದ ವಾರಂಟ್ ಇಲ್ಲದೆ ಖೇರ್ ಅವರ ಪ್ರಯಾಣಕ್ಕೆ ಅಡಚಣೆಯುಂಟು ಮಾಡಲಾಗಿದೆ. ಇದರಿಂದ ಗಲಿಬಿಲಿಗೊಂಡ ಸರ್ಕಾರ ಮತ್ತು ಅದರ ಉನ್ನತ ಕೈಗಳ ಪ್ರಭಾವವೇ ಹೊರತು ಬೇರೇನೂ ಅಲ್ಲ ಎಂದು ಕಾಂಗ್ರೆಸ್‌ನ ಸುಪ್ರಿಯಾ ಶ್ರೀನಾಟೆ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಅವಮಾನಿಸಿದ ಆರೋಪದ ಮೇಲೆ ಖೇರ್ ಅವರನ್ನು ಬಂಧಿಸುವಂತೆ ಬಿಜೆಪಿ ಒತ್ತಾಯಿಸಿದೆ. ಬಿಜೆಪಿ ಮುಖಂಡರು ಪೊಲೀಸರಿಗೆ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ ಎಂದಿರುವ ಕಾಂಗ್ರೆಸ್ ಮುಖಂಡರು ಮೋದಿ ಸರ್ಕಾರ ಗೂಂಡಾಗಳಂತೆ ವರ್ತಿಸುತ್ತಿದೆ. ಕೇವಲ ಎಫ್‌ಐಆರ್ ಆಧರಿಸಿ ಪವನ್‌ಖೇರ್ ಪ್ರಯಾಣವನ್ನು ನಿರ್ಬಂಧಿಸಿರುವುದು ನಾಚಿಕೆಗೇಡಿನ ಸಂಗತಿ. ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಪವನ್ ಜತೆಗಿರಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.
ಏನಿದು ಘಟನೆ?
ಹಿಂಡೆನ್ ಬರ್ಗ್ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ್ದ ಪವನ್‌ಖೇರ್ ಮಾಜಿ ಪ್ರಧಾನಿ ದಿ. ಪಿ.ವಿ. ನರಸಿಂಹರಾವ್‌ರವರು ಜಂಟಿ ಸಂಸದೀಯ ಸಮಿತಿ ರಚಿಸಿದ್ದರು. ಅಟಲ್ ಬಿಹಾರಿ ವಾಜಪೇಯಿರವರು ಜಂಟಿ ಸಂಸದೀಯ ಸಮಿತಿ ರಚಿಸಿದ್ದರು, ಆದರೆ, ನರೇಂದ್ರ ಗೌತಮ್‌ದಾಸ್ ಕ್ಷಮಿಸಿ, ದಾಮೋದರ ದಾಸ್ ಮೋದಿಗೆ ಹಿಂಡೆನ್ ಬರ್ಗ್ ಪ್ರಕರಣದ ತನಿಖೆ ನಡೆಸಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕ ಪವನ್‌ಖೇರ್ ಬಂಧನ.

ಅಸ್ಸಾಂ ಪೊಲೀಸರಿಂದ ಬಂಧಿಸಲ್ಪಟ್ಟ ಖೇರ್.

ಬಂಧನ ವಿರೋಧಿಸಿ ಕಾಂಗ್ರೆಸ್ ನಾಯಕರ ಹಠಾತ್ ಪ್ರತಿಭಟನೆ.

ವಿಮಾನ ಹಾರಾಟಕ್ಕೆ ತೊಂದರೆ ಇಲ್ಲ ಎಂದ ಇಂಡಿಗೊ.