ಕೈ ನಾಯಕರಿಗೆ ತಲೆಕೆಟ್ಟಿದೆ

ಬೆಂಗಳೂರು,ಏ.೬:ನಟ ಕಿಚ್ಚಾ ಸುದೀಪ್ ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಲು ನಿರ್ಧಸಿರಿವುದಕ್ಕೆ ಕಾಂಗ್ರೆಸ್ ಪಕ್ಷ ಮಾಡಿರುವ ಟೀಕೆ ಸರಿಯಲ್ಲ. ಕಾಂಗ್ರೆಸ್ ಅವರಿಗೆ ತಲೆ ಕೆಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಪಕ್ಷದ ಸಂಸ್ಥಾಪಕ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಸುದೀಪ್ ಬಿಜೆಪಿಗೆ ಬೆಂಬಲ ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದರು.
ನಟ ಸುದೀಪ್ ಬಿಜೆಪಿಗೆ ಬೆಂಬಲ ನೀಡುತ್ತಿರುವುದು ಕಾಂಗ್ರೆಸ್‌ನವರಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ, ಈ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅವರಿಗೆ ತಲೆ ಕೆಟ್ಟಿದೆ. ಏನೇನೋ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೈಸೂರಿನ ವರುಣಾ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ವಿ. ಸೋಮಣ್ಣ, ಸ್ಪರ್ಧಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವರಿಷ್ಠರು ಏನು ಹೇಳುತ್ತಾರೋ ಅದರಂತೆ ಎಲ್ಲವೂ ನಡೆಯುತ್ತೆ. ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ ಹೈಕಮಾಂಡ್‌ಗೆ ಕಳುಹಿಸಲಾಗುವುದು ಎಂದರು.