ಕೈ ನಾಯಕರಿಂದ ಅಕ್ಕಿ ರಾಜಕೀಯ:ಟೀಕೆ

ಕೋಲಾರ, ಜೂ,೨೩-ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತಾಡಿಕೊಂಡು ಅನ್ನಭಾಗ್ಯದ ೧೦ ಕೆಜಿ ಅಕ್ಕಿ ಭರವಸೆ ನೀಡಿದ್ದಾರೆ, ಆದರೆ ಕೇಂದ್ರದ ಪ್ರಧಾನಿ ಆಗಲಿ, ಆಹಾರ ಸಚಿವರ ಬಳಿ ಮಾತಾಡಿಕೊಂಡು ಭರವಸೆ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಎಸ್.ಮುನಿಸ್ವಾಮಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ಅಕ್ಕಿಯಲ್ಲಿ ರಾಜಕೀಯ ಶುರು ಮಾಡಿರುವ ಕಾಂಗ್ರೆಸ್ ನಾಯಕರು ಮೊದಲು ಕೇಂದ್ರದ ಪಾಲು ಹೇಳುತ್ತಿರಲಿಲ್ಲ, ಈಗ ೫ ಕೆ.ಜಿ ಅಕ್ಕಿ ಕೇಂದ್ರದ್ದು ಎಂದು ನಿಜ ಹೇಳುತ್ತಿದ್ದಾರೆ ಎಂದರು.
ಸತೀಶ್ ಜಾರಕಿಹೊಳಿ ಸರ್ವರ್ ಹ್ಯಾಕ್ ಮಾಡಿದ್ದಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಸಚಿವ ಸತೀಶ್ ಜಾರಕಿ ಹೊಳಿಗೆ ಸರ್ವರ್ ಬಗ್ಗೆ ಗಾಳಿ ಗಂಧ ಗೊತ್ತಿಲ್ಲ, ಕಳೆದ ಬಾರಿ ಇವಿಎಂ ಮೆಷನ್ ಹ್ಯಾಕ್ ಮಾಡಿದ್ದಾರೆ ಅಂದಿದ್ದರು, ಈ ಬಾರಿ ಅವರು ಇವಿಎಂ ಹ್ಯಾಕ್ ಮಾಡಿ ೧೩೫ ಶಾಸಕರು ಗೆದ್ದಿದ್ದಾರ ಎಂದು ಪ್ರಶ್ನಿಸಿದರು.
ಕೋಟಿಗಟ್ಟಲೆ ಹಣ ಹೊಂದಿರುವವರು ಅವರು, ೧೩೫ ಶಾಸಕರ ಗೆಲುವಿನ ಸಂಶಯ ಇದೆ ಇವಿಎಂ ಹ್ಯಾಕ್ ಮಾಡಿರುವ ರೀತಿಯೇ ವೆಬ್‌ಸೈಟ್ ಹ್ಯಾಕ್ ಮಾಡಿರುವ ಸಂಶಯವಿದೆ ಎಂದು ಟಾಂಗ್ ನೀಡಿದ ಅವರು, ಅವರಿಗೆ ಯೋಗ್ಯತೆ ಇದ್ದಿದ್ದರೆ ನುಡಿದಂತೆ ನಡೆಯ ಬೇಕಾಗಿತ್ತು ಅದರೆ ಜನರಿಗೆ ಮಾತು ಕೊಟ್ಟು ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರ ಮಾಡುತ್ತಿರುವುದಕ್ಕೆ ಅವರಿಗೆ ನಾಚಿಕೆ ಆಗಬೇಕು, ಅವರ ಯೋಗ್ಯತೆ ಏನು ಎಂದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಗೃಹ ಜ್ಯೋತಿಗೂ ಸಹ ಹಲವು ಷರತ್ತುಗಳನ್ನ ವಿದಿಸಿ ಮೋಸ ಮಾಡುತ್ತಿದ್ದಾರೆ. ಅಕ್ಕಿ ಕಾಳ ಸಂತೆಯಲ್ಲಿ ಖರೀದಿ ಮಾಡಿ ಕೊಡುತ್ತೇವೆ ಎನ್ನುತ್ತಿದ್ದಾರೆ ದಯವಿಟ್ಟು ನೀವು ಅಕ್ಕಿ ಕೊಡಿ, ಇಲ್ಲವಾದಲ್ಲಿ ಹಣದ ರೂಪದಲ್ಲಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಅವರು ಮಾಲೂರು ಶಾಸಕ ನಂಜೇಗೌಡ ವಿರುದ್ದ ಹರಿಹಾಯ್ದ ಅನ್ ಎಜುಕೇಟೆಡ್ ಅವರ ಬಗ್ಗೆ ಹೆಚ್ವಿಗೆ ನಾನು ಮಾತನಾಡಲ್ಲ, ಅವರನ್ನ ಟೇಕಲ್ ಸುತ್ತಮುತ್ತ ಬೇರೆ ರೀತಿಯಲ್ಲೇ ಕರೆಯುತ್ತಾರೆ ಅಕ್ಕಿಕಳ್ಳ, ಹಾಲು ಕಳ್ಳ, ಮಣ್ಣು ಕಳ್ಳ, ಕಲ್ಲು ಕಳ್ಳ ಎನ್ನುತ್ತಾರೆ. ಅವರಿಗೆ ತಾಕತ್ ಇದ್ದರೆ ಅವರು ಏನ್ ಅಭಿವೃದ್ದಿ ಮಾಡಿದ್ದಾರೆ ಹೇಳಲಿ, ಕೇಂದ್ರದ ಯೋಜನೆಗಳನ್ನ ಸಹ ನಮ್ಮದು ಎಂದು ಹೇಳಿಕೊಂಡು ಓಡಾಡುತ್ತಾರೆ, ನಾವು ಕೊಟ್ಟಿರುವ ಎಲ್ಲಾ ಯೋಜನೆಗಳ ಹಣವನ್ನ ವಾಪಸ್ ಪಡೆದಿದ್ದಾರೆ, ನಾನು ಚಾಲೆಂಜ್ ಮಾಡುತ್ತೇನೆ ನಾವು ಕೊಟ್ಟ ಹಣವನ್ನ ತಡೆ ಹಿಡಿದಿದ್ದಾರೆ, ಕೋಲಾರಕ್ಕೆ ಏನೇನ್ ತಂದಿದ್ದಾರೆ ? ಎಂದು ಪ್ರಶ್ನಿಸಿದ ಅವರು ತಾಕತ್ ಇದ್ರೆ ಆರೋಪಗಳ ದಾಖಲೆ ಬಿಡುಗಡೆ ಮಾಡಲಿ ಎಂದು ಶಾಸಕ ನಂಜೇಗೌಡರಿಗೆ ಸವಾಲು ಹಾಕಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆ ಯಾಜಮಾನಿಗೆ ೨ ಸಾವಿರ ರೂ ನೀಡುವುದಾಗಿ ಘೋಷಿಸಿದ್ದು, ಇದರಿಂದ ೩-೪ ಮಂದಿ ಮಹಿಳೆಯರು ಇರುವಂತ ಮನೆಗಳಲ್ಲಿ ಮನೆ ಯಾಜಮಾನಿ ನಾನು, ನೀನು ಎಂದು ಒಳ ಕಿತ್ತಾಟಗಳು ಆರಂಭವಾಗಿದೆ, ಕಾಂಗ್ರೆಸ್ ಪಕ್ಷವು ಮೊದಲಿಂದಲೂ ಒಡೆದು ಆಳುವ ನೀತಿ ಆಳವಡಿಸಿಕೊಂಡಿದ್ದು ಗ್ಯಾರಂಟಿ ಯೋಜನೆಗಳಲ್ಲೂ ಕುಟುಂಬದ ಒಗ್ಗಟ್ಟು ಒಡೆದು ಆಳುವ ನೀತಿ ಅಳವಡಿಸಿಕೊಂಡಿದೆ ಎಂದು ವ್ಯಂಗವಾಡಿದರು.