
ಕೆ.ಆರ್.ಪುರ,ಏ.೮- ಬಿಬಿಎಂಪಿಗೆ ಹೊಂದಿಕೊಂಡಿರುವ ಕ್ಷೇತ್ರದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೈಕೊಂಡ ಜನೋಪಯೋಗಿ ಕಾರ್ಯಗಳನ್ನು ಮೆಚ್ಚಿ ಅನ್ಯ ಪಕ್ಷದ ಮುಖಂಡರು ಬಿಜೆಪಿಗೆ ಸೇರುತ್ತಿರುವುದು ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಉತ್ತೇಜನ ನೀಡುತ್ತಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.
ಮಹದೇವಪುರ ಕ್ಷೇತ್ರದ ಸಿಗೇಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಧು ನೇತೃತ್ವದಲ್ಲಿ ೧೦೦ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಿಗಬೇಕಾದ ಎಲ್ಲಾ ಗೌರವ ಸಿಗುತ್ತದೆ ಪಕ್ಷಕ್ಕೆ ಸೇರ್ಪಡೆಯಾದ ತಕ್ಷಣ ನಾವೆಲ್ಲರೂ ಬಿಜೆಪಿಗರು, ಹೊಸಬರು ಹಳಬರು ಎಂದು ಭೇದಭಾವ ಇಲ್ಲದೇ ಪಕ್ಷ ಸಂಘಟನೆ ಮತ್ತು ಪಕ್ಷ ನೀಡುವ ಜವಾಬ್ದಾರಿಯನ್ನ ಸರಿಯಾಗಿ ನಿಭಾಯಿಸಬೇಕು ಎಂದರು.
ನಮ್ಮ ಜನೋಪಯೋಗಿ ಕಾರ್ಯಗಳನ್ನು ಮೆಚ್ಚಿ ಹಿರಿಯ ಕಾಂಗ್ರೆಸ್ ಮುಖಂಡ ಸುರೇಶ್ ಬಾಬು. ಸಿಗೇಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಧು, ಲೇಔಟ್ ಕೃಷ್ಣಪ್ಪ, ಅಮರ್, ಮುರುಗೇಶ್ ಪ್ಪ ,ಕೃಷ್ಣ, ಶಂಕರ್, ಯಲ್ಲಪ್ಪ, ನಾರಾಯಣ ಸ್ವಾಮಿ ಸೇರಿದಂತೆ ಸುಮಾರು ೧೦೦ ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಅರವಿಂದ ಲಿಂಬಾವಳಿ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್ ಇದ್ದರು.