ಕೋಲಾರ,ಏ.೩೦-ಕರ್ನಾಟಕವನ್ನು ನಂ.೧ ರಾಜ್ಯವನ್ನಾಗಿ ಮಾಡುವುದೇ ನಮ್ಮ ಗುರಿಯಾಗಿದೆ. ಆದರೆ, ಕಾಂಗ್ರೆಸ್, ಜೆಡಿಎಸ್‌ನಂತಹ ಗುಜರಿ ಇಂಜಿನ್‌ಗಳಿಂದ ಇದು ಸಾಧ್ಯವಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಮತದಾರರು ಕ್ಲೀನ್ ಬೋಲ್ಡ್ ಮಾಡುತ್ತಾರೆ ಈ ಮೂಲಕ ಕಾಂಗ್ರೆಸ್, ಜೆಡಿಎಸ್ ಭ್ರಷ್ಟ ಸರ್ಕಾರದಿಂದ ಜನತೆಯನ್ನು ರಕ್ಷಿಸಲು ಈ ಬಾರಿ ಬಿಜೆಪಿಗೆ ಮತದಾರರು ಬಹುಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿನ್ನದ ನಾಡು ಕೋಲಾರದಲ್ಲಿ ಇಂದು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗದುಕೊಂಡರು. ಕೋಲಾರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಭಾಗವಹಿಸಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನಿದ್ದೆಗೆಡಿಸುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಈ ಎರಡು ಪಕ್ಷಗಳು ತೊಡಕು ಉಂಟು ಮಾಡುತ್ತಿದೆ ಎಂದು ಟೀಕಿಸಿದರು.
ಈ ಚುನಾವಣೆ ಕೇವಲ ಶಾಸಕರ ಆಯ್ಕೆಗೆ ಮಾತ್ರ ಸೀಮಿತವಾಗಿಲ್ಲ. ಮುಂದಿನ ೨೫ ವರ್ಷಗಳ ಅವಧಿಯಲ್ಲಿ ಕರ್ನಾಟಕವನ್ನು ಅಭಿವೃದ್ಧಿ ರಾಜ್ಯ ಮಾಡುವುದಾಗಿದೆ. ಅಸ್ಥಿರ ಸರ್ಕಾರ ರಚನೆಯಾದರೆ ಲಾಭಕ್ಕಿಂತ ನಷ್ಟ ಜಾಸ್ತಿಯಾಗುತ್ತದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು ಎಂದು ಮತದಾರರಿಗೆ ಕರೆ ಕೊಟ್ಟರು.
ಡಬಲ್ ಇಂಜಿನ್ ಸರ್ಕಾರದ ಸಾಧನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೋದಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಅಭಿವೃದ್ಧಿ ಕೆಲಸವನ್ನು ಪಕ್ಷ ಮಾಡಿದೆ. ಪಕ್ಷಕ್ಕೆ ನೀಡುವ ಒಂದು ಮತದಿಂದ ಬದಲಾವಣೆಗಳು ಆಗುತ್ತವೆ. ಆರ್ಥಿಕತೆಗೆ ಪ್ರೋತ್ಸಾಹ ದೊರೆಯುತ್ತದೆ. ಕೊರೊನಾ ಸಂಕಷ್ಟದಲ್ಲಿ ತಾವು ಕೈಗೊಂಡ ದಿಟ್ಟ ಕ್ರಮಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಸೋಂಕು ತಡೆಗೆ ಲಸಿಕೆ ಅಭಿವೃದ್ಧಿ ಪಡಿಸಿದ ಸಾಮರ್ಥ್ಯ ಇಡೀ ವಿಶ್ವಕ್ಕೆ ಗೊತ್ತಾಗಿದೆ ಎಂದರು.
ಡಬಲ್ ಇಂಜಿನ್ ಸರ್ಕಾರದ ಮೂಲಕ ಕೋಲಾರಕ್ಕೆ ಹಲವು ಕೈಗಾರಿಕೆಗಳು ಬರುತ್ತಿವೆ. ಮುಳಬಾಗಿಲ ದೋಸೆ ಹೆಚ್ಚು ಪ್ರಸಿದ್ಧಿಯಾಗಿದೆ. ಆದರೆ ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿ ಯೋಜನೆಗಳು ಅನುಷ್ಠಾನಕ್ಕೆ ಬರುವುದಿಲ್ಲ ಎಂದು ಮೂದಲಿಸಿದರು.
೨೦೦೫ ರಿಂದ ೧೪ರವರೆಗೂ ಕೇಂದ್ರದಲ್ಲಿ ೧೦ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿದೆ. ದೇಶದ ೧೮ ಸಾವಿರ ಹಳ್ಳಿಗಳಿಗೆ ವಿದ್ಯುತ್ ಕೊಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ, ಅನೇಕ ಹಳ್ಳಿಗಳು ಕತ್ತಲಲ್ಲೇ ಕಾಲ ಕಳೆದವು. ಕಾಂಗ್ರೆಸ್ ದೇಶದ ಜನರಿಗೆ ಮೋಸ ಮಾಡಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ೧೮ ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದು ಮೋದಿ ತಿಳಿಸಿದರು.
ಖರ್ಗೆಗೆ ಮೋದಿ ತಿರುಗೇಟು
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಖರ್ಗೆ ಅವರ ಹೇಳಿಕೆಯನ್ನು ಸ್ವೀಕರಿಸುತ್ತೇನೆ. ಭಗವಾನ್ ಶಿವನ ಕೊರಳಿನಲ್ಲಿ ಶೋಭಾಯಮಾನವಾಗಿ ಸುತ್ತಿಕೊಂಡಿರುವುದು ಅದೇ ಸರ್ಪ. ಈ ದೇಶದ ಜನರು ಈಶ್ವರ ಸ್ವರೂಪಿ. ನಾನು ಹಾವಾಗಿ ಅವರ ಕೊರಳಲ್ಲಿರಲು ನನಗೇನು ನೋವಿಲ್ಲ ಎಂದು ತಿರುಗೇಟು ನೀಡಿದರು.
ಖರ್ಗೆ ಅವರು ಚುನಾವಣಾ ಪ್ರಚಾರದ ವೇಳೆ ಮೋದಿ ಅವರು ವಿಷ ಸರ್ಪವಿದ್ದಂತೆ, ವಿಷವಿದೆಯೇ ಎಂದು ನೆಕ್ಕಲು ಹೋದರೆ ಅವರು ಸತ್ತೇ ಹೋಗುತ್ತಾರೆ ಎಂದು ನೀಡಿರುವ ಹೇಳಿಕೆಗೆ ಕೋಲಾರ ಸಮಾವೇಶದಲ್ಲಿ ಪ್ರಧಾನಿ ತಿರುಗೇಟು ನೀಡಿದ್ದಾರೆ.
ಖರ್ಗೆ ಅವರ ಹೇಳಿಕೆಯನ್ನು ನಾನು ಸ್ವೀಕರಿಸುತ್ತೇನೆ. ಆದರೆ, ರಾಜ್ಯದ ಜನ ಖರ್ಗೆ ಅವರನ್ನು ರಾಜ್ಯದ ಜನ ಕ್ಷಮಿಸಲ್ಲ.
ಈ ಬಗ್ಗೆ ಆಕ್ರೋಶವಿದೆ. ಮೇ ೧೦ ರಂದು ನಡೆಯುವ ಮತದಾನದಲ್ಲಿ ಕಾಂಗ್ರೆಸ್ ವಿರುದ್ಧ ಮತಚಲಾಯಿಸಲಿದ್ದಾರೆ ಎಂದು ತಿರುಗೇಟು ನೀಡಿದರು.