ಕೈ ಜಗಳ ಬೀದಿರಂಪ : ಅಶೋಕ್ ಗೇಲಿ

ಬೆಂಗಳೂರು, ಜು. ೨೫- ಕಾಂಗ್ರೆಸ್ ಮನೆ ಜಗಳ, ಬೀದಿ ರಂಪವಾಗಿದೆ. ಒಬ್ಬ ಶಾಸಕ ಕೆಪಿಸಿಸಿ ಅಧ್ಯಕ್ಷರಿಗೆ ಸವಾಲು ಹಾಕುತ್ತಾರೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಇದೆಯೋ ಇಲ್ಲವೋ ತಿಳಿಯುತ್ತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಗೇಲಿ ಮಾಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಹೇಳುವರು, ಕೇಳುವವರೂ ಯಾರೂ ಇಲ್ಲ. ನಮಗೆ ಹೇಳುವವರು, ಕೇಳುವವರಿದ್ದಾರೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ ನಾಯಕರ ಸಿಎಂ ಪೈಪೋಟಿ ವಿಚಾರ ಹಾದಿ-ಬೀದಿ ರಂಪವಾಗಿದೆ. ಇದನ್ನೆಲ್ಲಾ ನೋಡಿದರೆ ಕೆಪಿಸಿಸಿ ಅಧ್ಯಕ್ಷರಿಗೆ, ಹೈಕಮಾಂಡ್‌ಗೆ ಯಾರ ಮೇಲೂ ಹಿಡಿತ ಇಲ್ಲ ಎಂದು ಸ್ಪಷ್ಟವಾಗಿದೆ ಎಂದರು.
ಶಾಸಕ ಜಮೀರ್ ಅಹಮದ್ ಖಾನ್, ಕೆಪಿಸಿಸಿ ಅಧ್ಯಕ್ಷರಿಗೆ ಸವಾಲು ಹಾಕಿ ನನ್ನ ಜೀವ ಇರುವವರೆಗೂ ಮಾತನಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಅವಾಜ್ ಹಾಕಿದ್ದಾರೆ. ಕಾಂಗ್ರೆಸ್‌ನ ಜಗಳ ನಗೆಪಾಟಿಲಾಗಿದೆ ಎಂದರು.
ಪಂಜಾಬ್‌ನಲ್ಲಿ ಸಿದ್ಧು ಹೊಡೆತಕ್ಕೆ ಕಾಂಗ್ರೆಸ್ ಚೂರು ಚೂರಾಯಿತು ರಾಜ್ಯದಲ್ಲೂ ಅದೇ ರೀತಿ ಆಗುತ್ತದೆ ಎಂದು ಆರ್. ಅಶೋಕ್ ಭವಿಷ್ಯ ನುಡಿದರು.
ಕಾಂಗ್ರೆಸ್‌ನಲ್ಲಿ ಗದ್ದುಗೆಗೆ ಗುದ್ದಾಟ ನಡೆದಿದೆ. ಜಾತಿಗಳ ಬಗ್ಗೆ ಮಾತನಾಡುತ್ತಾರೆ. ಒಕ್ಕಲಿಗ ಸಮುದಾಯದ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿಕೆ ನೀಡವುದನ್ನು ನಿಲ್ಲಿಸಬೇಕು. ಒಕ್ಕಲಿಗರು ಯಾವತ್ತೂ ಜಾತಿ ಮಾಡಿಲ್ಲ. ಜಾತಿಗೊಬ್ಬರನ್ನು ಮುಖ್ಯಮಂತ್ರಿ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಅಶೋಕ್ ಹೇಳಿದರು.
ಇದು ಜಾತಿ ಸಾಮ್ರಾಜ್ಯ ಅಲ್ಲ. ಕಾಂಗ್ರೆಸ್‌ನ ಮುಖ್ಯಮಂತ್ರಿಯಾಗಿದ್ದ ವೀರೇಂದ್ರಪಾಟೀಲ್ ಅವರಿಗೆ ಆ ಪಕ್ಷ ಮಾಡಿದ ಅನ್ಯಾವನ್ನು ಜನ ಮರೆತಿಲ್ಲ ಎಂದು ಅಶೋಕ್ ಹೇಳಿದರು.ಜಮೀರ್ ಅಹಮದ್ ಅವರ ಹೇಳಿಕೆ ಹಿಂದೆ ಸಿದ್ಧರಾಮಯ್ಯ ಇದ್ದಾರೆ. ಸಿದ್ಧರಾಮಯ್ಯ ನನ್ನದು ಕೊನೆಯ ಚುನಾವಣೆ ಎಂದು ಹೇಳುತ್ತಿದ್ದಾರೆ. ಸಿದ್ಧರಾಮಯ್ಯ ಪರ ಕಾಂಗ್ರೆಸ್‌ನಲ್ಲಿ ಹಲವರು ಮಾತನಾಡುತ್ತಾರೆ. ಅದರೆ ಡಿಕೆಶಿ ಪರ ಅವರೇ ಬ್ಯಾಟಿಂಗ್ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಅವರು ವ್ಯಂಗ್ಯವಾಡಿದರು.