ಕೈ ಗ್ಯಾರಂಟಿ ಪೊಳ್ಳು ಭರವಸೆ: ಮೋದಿ ವಾಗ್ದಾಳಿ

ದಾವಣಗೆರೆ, ಮಾ.25- ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ಪೊಳ್ಳು ಭರವಸೆಗಳ ಗ್ಯಾರಂಟಿ ನೀಡುತ್ತಿದೆ ಎಂದು ಪ್ರಧಾನಿ ನರೇಂದ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ನಿಮ್ಮ ಸೇವೆ ಮಾಡಬೇಕೆಂದು ಬಯಸುತ್ತಿದ್ದೇನೆ. ಆದರೆ ಕಾಂಗ್ರೆಸ್ ನನ್ನ ಸಮಾಧಿ ಬಯಸುತ್ತಿದೆ. ಜನರು ಮೋದಿ ನಿನ್ನ ಕಮಲ ಅರಳುತ್ತದೆ ಎಂದು ಹೇಳುತ್ತಿರುವುದಾಗಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಸಮಾವೇಶದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇದೇ ರೀತಿಯ ಭರವಸೆ ನೀಡಿತ್ತು. ಆದರೆ ಬಿಜೆಪಿ ಗೆಲುವು ಸಾಧಿಸಿರುವ ಉದಾಹರಣೆ ನಮ್ಮ ಮುಂದೆ ಇದೆ.ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್​​ನವರು ಹಲವು ಗ್ಯಾರಂಟಿಗಳನ್ನು ಘೋಷಿಸಿದ್ದು ಇವುಗಳೆಲ್ಲ ಪೊಳ್ಳು ಭರವಸೆಗಳು ಎಂದು ಟೀಕಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕರ್ಮಭೂಮಿ‌ ಕಲಬುರ್ಗಿಯಲ್ಲಿ ಬಿಜೆಪಿಯ ಮೇಯರ್‌ ಹಾಗೂ ಉಪ ಮೇಯರ್‌ ಆಯ್ಕೆಯಾಗಿದ್ದಾರೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸಂಕೇತ. ಕರ್ನಾಟಕದಲ್ಲಿ ಬಿಜೆಪಿ ವಿಜಯ ಯಾತ್ರೆ ಆರಂಭವಾಗಿದೆ ಎಂದರು.
ಈ ವಿಜಯ ಸಂಕಲ್ಪ ಯಾತ್ರೆ ಹೀಗೆ ಮುಂದುವರೆಯಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆಕೊಟ್ಟರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ,ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ನೋಡಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಪ್ರತಿಪಕ್ಷದ ಪ್ರಮುಖ ನಾಯಕರೊಬ್ಬರು ಕಾರ್ಯಕರ್ತನ ಕಪಾಳಕ್ಕೆ ಹೊಡೆಯುತ್ತಾರೆ. ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಗೌರವಿಸದವರು ನಾಡಿನ ಜನರನ್ನು ಗೌರವಿಸುತ್ತಾರಾ ಎಂದು ಪ್ರಶ್ನಿಸಿದರು. ಇದಕ್ಕೆಲ್ಲಾ ನೀವು ಮತದಾನದ ಮೂಲಕ ಉತ್ತರ ಕೊಡಿ ಎಂದು ತಿಳಿಸಿದರು.
ದಲಿತ, ಆದಿವಾಸಿ ಸೇರಿದಂತೆ ವಂಚಿತ ಸಮುದಾಯಗಳ ಏಳಿಗೆ ಬಿಜೆಪಿಯ ಆದ್ಯತೆಯಾಗಿದೆ. ಹೀಗಾಗಿ ಇದನ್ನೆಲ್ಲಾ ಈಡೇರಿಸಬೇಕಾದರೆ ಪೂರ್ಣ ಬಹುಮತದ ಅಗತ್ಯವಿದೆ. ಕರ್ನಾಟಕಕ್ಕೆ ಬಹುಮತದ ಸರ್ಕಾರ ಬೇಕಾಗಿದೆ. ಇಲ್ಲಿ ಬಹುಮತದ ಬಿಜೆಪಿ ಸರ್ಕಾರ ಬೇಕು. ಬಹುಮತ ಸಿಗದಿದ್ದರೆ, ರಾಜ್ಯಕ್ಕೆ ಅನುಕೂಲವಿಲ್ಲ. ಸದೃಢ ಸರ್ಕಾರ ಬೇಕು. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಸ್ಥಿರ ಸರ್ಕಾರ ಅಗತ್ಯ ಎಂದು ಮೋದಿ ಪ್ರತಿಪಾದಿಸಿದರು.