ಕೈ ಗೊಂದಲ ಜನ ಅತಂತ್ರ: ಜೋಶಿ ಕಿಡಿ

ಹುಬ್ಬಳ್ಳಿ, ಅ ೨೯: ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲದಿಂದಾಗಿ ಜನ ಅತಂತ್ರರಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಎರಡು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೊರಟಿದ್ದಾರೆ. ಡಿಸಿಎಂ ಅವರನ್ನು ಬಿಟ್ಟು ಸಭೆ ಮಾಡುವ ಸ್ಥಿತಿಗೆ ಸಿದ್ಧರಾಮಯ್ಯ ತಲುಪಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್‌ನಲ್ಲಿ ನಿತ್ಯ ಭಿನ್ನಮತ ಹೆಚ್ಚಾಗುತ್ತಿದೆ. ಅಧಿಕಾರಕ್ಕಾಗಿ ಒಳಜಗಳ ನಡೆಯುತ್ತಿದೆ ಎಂದು ಅವರು ನುಡಿದರು.
ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ ಜಗಳ ತಾರಕಕ್ಕೇರಿದೆ. ಅದರಿಂದ ಗಮನ ಬೇರೆಡೆ ಸೆಳೆಯಲು ಹುಲಿ ಉಗುರಿನ ಪೆಂಡೆಂಟ್ ವಿಚಾರ ಮುಂದೆ ತರುತ್ತಿದ್ದಾರೆ. ಇದು ದೊಡ್ಡ ನಾಟಕ ಎಂದು ಅವರು ದೂರಿದರು.ಕಾಂಗ್ರೆಸ್‌ನವರು ಆಪರೇಶನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಈ ಸರ್ಕಾರವನ್ನು ಉರುಳಿಸಲು ಬಿಜೆಪಿ ಯಾವುದೇ ಚಿಂತನೆ ಮಾಡಿಲ್ಲ ಎಂದು ಜೋಶಿ ಸ್ಪಷ್ಟವಾಗಿ ತಿಳಿಸಿದರು. ಕೇವಲ ೭೦ ಶಾಸಕರನ್ನು ಕರೆದುಕೊಂಡು ಸರ್ಕಾರ ರಚನೆ ಮಾಡಲು ಯೋಚಿಸುವುದು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಜನ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ, ಐದು ವರ್ಷ ಅವರೇ ನಡೆಸಲಿ ಎಂದು ಹೇಳಿದರು.
ಒಂದೆಡೆ ಸ್ವಾಭಿಮಾನ ಕರ್ನಾಟಕ ಎಂದು ಮಾತನಾಡುತ್ತಿರುವ ಸಿದ್ದರಾಮಯ್ಯ ಇನ್ನೊಂದೆಡೆ ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರವಾಗಿ ಯಾವುದೇ ಸಹಕಾರ ನೀಡುತ್ತಿಲ್ಲ ಎಂದ ಅವರು, ಕೇಂದ್ರ ಜಲ ಸಂಪನ್ಮೂಲಗಳ ವಿಚಾರದಲ್ಲಿಯೂ ಸಹ ಅವರು ಸಹಕಾರ ಕೊಟ್ಟಿಲ್ಲ ಎಂದು ಖಡಾಖಂಡಿತವಾಗಿ ನುಡಿದರು.
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ರೂಪಿಸಿರುವ ಕಾನೂನುಗಳೇ ಪಾಲನೆ ಆಗುತ್ತಿವೆ. ‘ಘಮಂಡಿ’ ಘಟಬಂಧನ ಉಳಿಸಿಕೊಳ್ಳಲು ಡಿ.ಎಂ.ಕೆ ಪರವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಪ್ರಚಾರ ಮಾಡುತ್ತಾರೆ. ಆದರೆ ಮೇಕೆದಾಟು ಯೋಜನೆ ಬಗ್ಗೆ ಡಿ.ಎಂ.ಕೆ ಜೊತೆಗೆ ಏಕೆ ಚರ್ಚೆ ಮಾಡುತ್ತಿಲ್ಲ ? ಎಂದು ಜೋಶಿ ಪ್ರಶ್ನಿಸಿದರು.
ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಯಾರಾದರೂ ಅನ್ಯಾಯ ಮಾಡಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಆದರೆ ನಾವು ನೆಲ, ಜಲ ರಕ್ಷಣೆ ವಿಚಾರದಲ್ಲಿ ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.ಇಸ್ರೇಲ್ ವಿರುದ್ಧ ಯುದ್ಧ ಮಾಡುತ್ತಿರುವವರು ಉಗ್ರರು, ಅವರಿಗೆ ಯಾವುದೇ ದೇಶ ಇಲ್ಲ. ಭಾರತ ಜಾಗತಿಕ ಮಟ್ಟದಲ್ಲಿ ಉಗ್ರವಾದಿಗಳ ವಿರುದ್ಧ ಮಾತನಾಡುತ್ತಿದೆ. ಹೀಗಾಗಿ ನಾವು ಉಗ್ರರ ವಿರುದ್ಧ ಬೆಂಬಲ ನೀಡಿದ್ದೇವೆ ಎಂದು ಸಚಿವರು ಹೇಳಿದರು.
ಎಫ್‌ಡಿಎ ಪರೀಕ್ಷೆ ಅಕ್ರಮ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಪಿಎಸ್‌ಐ ಹಗರಣ ಹೊರಬಂತು. ನಾವು ಐಜಿ ಅವರನ್ನೇ ಜೈಲಿಗೆ ಕಳುಹಿಸಿದೆವು. ಈಗ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಗಟ್ಟಲು ಸಾಕಷ್ಟು ತಂತ್ರಜ್ಞಾನ ಬಂದಿದೆ. ಆದರೂ ಹೀಗೇಕಾಯಿತು ಗೊತ್ತಾಗುತ್ತಿಲ್ಲ ಎಂದ ಅವರು, ಮಲ್ಲಿಕಾರ್ಜುನ ಖರ್ಗೆಯವರ ಜಿಲ್ಲೆಯಲ್ಲಿಯೇ ಇಂಥ ಹಗರಣಗಳು ಏಕೆ ನಡೆಯುತ್ತಿವೆಯೋ ತಿಳಿಯುತ್ತಿಲ್ಲ ಎಂದು ನುಡಿದರು.