ಕೈ ಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಭಾರತಕ್ಕೆ ಭಾರೀ ನಿರಾಸೆ :ಕಾನ್ಪುರ ಟೆಸ್ಟ್ ಡ್ರಾ

ಕಾನ್ಪುರ, ನ.29- ಅಂತಿಮ ದಿನದಾಟ ಮುಗಿಯುವ ತನಕ ಅಪಾರ ಕುತೂಹಲ‌ ಕೆರಳಿಸಿದ್ದ ಭಾರತ ಮತ್ತು ನ್ಯೂಜೆಲೆಂಡ್ ತಂಡಗಳ ನಡುವಣ ಮೊದಲ ಟೆಸ್ಟ್ ಕಡೆಗೂ ಡ್ರಾನಲ್ಲಿ ಅಂತ್ಯಗೊಂಡಿತು.
ಭಾರತದ ಗೆಲುವಿಗೆ ಒಂದು ವಿಕೆಟ್ ಮಾತ್ರ ಬೇಕಿತ್ತು. ಆದರೆ ವಿಶ್ವಚಾಂಪಿಯನ್ ನ್ಯೂಜಿಲೆಂಡ್ ಆ ಒಂದು ವಿಕೆಟ್ ಬೀಳದಂತೆ ಎಚ್ಚರಿಕೆಯ ಆಟವಾಡಿತು. ಗೆಲುವಿನ ಸನಿಹಕ್ಕೆ ಬಂದಿದ್ದ ಭಾರತಕ್ಜೆ ತೀವ್ರ ನಿರಾಸೆಯಾಯಿತು.
ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಹಾನೆ ಪಡೆಗೆ‌ ಆ ಒಂದು ವಿಕೆಟ್ ಪಡೆಯಲು ಕಡೆ ಗಳಿಗೆಯವರೆಗೂ ನಡೆಸಿದ ಕಸರತ್ತು ಫಲ ನೀಡಲಿಲ್ಲ.‌ ಭಾರತಕ್ಕೆ
ಅದೃಷ್ಟವು ಕೈಕೊಟ್ಟಿತು. ನ್ಯೂಜಿಲೆಂಡ್ ಭಾರೀ ಅಂತರ ಸೋಲಿನಿಂದ ಪಾರಾಯಿತು.
ಮೊದಲು ಬ್ಯಾಟ್ ಮಾಡಿದ ಭಾರತ, ಶ್ರೇಯಸ್ ಅಯ್ಯರ್ ಭರ್ಜರಿ ಶತಕ, ಶುಭಮನ್ ಗಿಲ್‌ ಹಾಗೂ ರವೀಂದ್ರ ಜಡೇಜಾರ ಆರ್ಧ ಶತಕದ ನೆರವಿನಿಂದ 345 ರನ್ ಗಳಿಸಿತ್ತು. ಭಾರತದ ಸ್ಪಿನ್ ಮೋಡಿಗೆ ತತ್ತರಿಸಿದ ನ್ಯೂಜಿಲೆಂಡ್ 296 ರನ್ ಗಳಿಗೆ ಸರ್ವಪತನ ಕಂಡಿತ್ತು. ಅಕ್ಷರ್ ಪಟೇಲ್ 5 ವಿಕೆಟ್ ಕಬಳಿಸಿದ್ದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ಕಳೆದುಕೊಂ ಡು 234 ರನ್ ಗಳಿಸಿದ್ದಾಗ ಭಾರತ ಡಿಕ್ಲೇರ್ ಮಾಡಿಕೊಂಡಿತು.
284 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಹತ್ತಿದ ನ್ಯೂಜಿಲೆಂಡ್, ಅಶ್ವಿನ್ ಮತ್ತು ಜಡೇಜಾ ಸಂಘಟಿತ ದಾಳಿಯಿಂದ ಭಾರತ ಸಂಪೂರ್ಣ ಹಿಡಿತ ಸಾಧಿಸಿತು. ಆದರೆ ಒಂದು ವಿಕೆಟ್ ಪಡೆಯಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್ 9 ವಿಕೆಟ್ ನಷ್ಟಕ್ಕೆ 165 ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಯಿತು.
ಜಡೇಜಾ ನಾಲ್ಕು ಹಾಗೂ ಅಶ್ವಿನ್ ಮೂರು ವಿಕೆಟ್ ಗಳಿಸಿದರೆ, ಉಮೇಶ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.