ಕೈ ಗಾಯಕ್ಕೆ ಚಿಕಿತ್ಸೆ ಪಡೆದಿದ್ದ ಅಫ್ತಾಬ್

ನವದೆಹಲಿ, ನ.೧೬- ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲ, ಕೃತ್ಯ ವೆಸಗಿದ ಬಳಿಕ ಕೈಯ್ಯಲ್ಲಿ ಆಗಿದ್ದ ಗಾಯಕ್ಕೆ ಸ್ಥಳೀಯ ವೈದ್ಯರೊಬ್ಬರ ಬಳಿ ಚಿಕಿತ್ಸೆ ಪಡೆದಿರುವ ಸಂಗತಿ ಬಹಿರಂಗವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ವೈದ್ಯ ಡಾ. ಅನಿಲ್ ಕುಮಾರ್, ಎರಡು ದಿನಗಳ ಹಿಂದೆ, ಪೊಲೀಸರು ಆರೋಪಿಯನ್ನು ನನ್ನ ಆಸ್ಪತ್ರೆಗೆ ಕರೆತಂದು, ಈ ವ್ಯಕ್ತಿಗೆ ಮೇ ತಿಂಗಳಲ್ಲಿ ಚಿಕಿತ್ಸೆ ನೀಡಲಾಗಿತ್ತೇ ಎಂದು ಕೇಳಿದರು. ಆತನ ಗುರುತು ಹಿಡಿದು, ಹೌದು ಎಂದೆ. ಚಿಕಿತ್ಸೆ ವೇಳೆ ಆತ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದ.
ಗಾಯ ಹೇಗಾಯಿತೆಂದು ಕೇಳಿದಾಗ ಹಣ್ಣು ಕತ್ತರಿಸುವಾಗ ಸಣ್ಣ ಗಾಯವಾಯಿತು ಎಂದಿದ್ದ. ತನ್ನದು ಮುಂಬೈ ಮೂಲ, ಉದ್ಯೋಗ ನಿಮಿತ್ತ ದೆಹಲಿಗೆ ಬಂದಿರುವುದಾಗಿ ತಿಳಿಸಿದ್ದ ಎಂದರು.
ದೆಹಲಿ ಪೊಲೀಸರು ಅಫ್ತಾಬ್‌ನನ್ನು ಬಂಧಿಸುತ್ತಿದ್ದಂತೆ ಆತ ಕೆಲಸ ಮಾಡುತ್ತಿದ್ದ ಕಂಪನಿಯು ಆತನನ್ನು ಕೆಲಸದಿಂದ ವಜಾಗೊಳಿಸಿದೆ. ಕಳೆದ ೩ ತಿಂಗಳಿನಿಂದ ಆತ ಗುರುಗ್ರಾಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಯ ಮರುದಿನದಿಂದ ಆತ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದ ಎಂದು ಮೂಲಗಳು ತಿಳಿಸಿವೆ.
೨೮ ವರ್ಷದ ಅಫ್ತಾಬ್ ತನ್ನ ಪ್ರೇಯಸಿ ಶ್ರದ್ಧಾಳನ್ನು(೨೭) ಕೊಲೆ ಮಾಡಿ ದೇಹವನ್ನು ೩೫ ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟು, ಬಳಿಕ ಮೆಹ್ರೌಲಿ ಕಾಡಿನ ವಿವಿಧೆಡೆ ಹೂತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. ಈ ಸಂಬಂಧ ದೆಹಲಿ ಪೊಲೀಸರು ಮಂಗಳವಾರ ಆರೋಪಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದ್ದರು.
ತಲೆಗಾಗಿ ಹುಡುಕಾಟ?: ಪೊಲೀಸರಿಗೆ ಇನ್ನೂ ಶ್ರದ್ಧಾ ತಲೆ ಸಿಕ್ಕಿಲ್ಲ. ಹೀಗಾಗಿ ಹುಡುಕಾಟ ಮುಂದುವರಿದಿದೆ. ಪೊಲೀಸರು ಅಫ್ತಾಬ್‌ನೊಂದಿಗೆ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದು, ಮೃತದೇಹದ ಸಂಪೂರ್ಣ ಭಾಗಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಹಂತಕ ಹಾಗೂ ಪ್ರಕರಣದ ಬಗೆಗಿನ ಕೆಲ ಭಯಾನಕ ವಿಷಯಗಳು ಬಯಲಾಗಿವೆ.
ಸಣ್ಣ ಸಣ್ಣದಾಗಿ ಕತ್ತರಿಸಿದ್ದ ಶವದ ೩೫ ತುಂಡುಗಳ ಪೈಕಿ ಕೆಲವನ್ನು ಎಸೆದಿದ್ದ ಅರಣ್ಯದಲ್ಲಿನ ಜಾಗ ಗುರುತಿಸಲು ಪೊಲೀಸರಿಗೆ ಮೂರು ತಾಸು ಹಿಡಿಯಿತು. ಅಪರಾಧ ಕೃತ್ಯದ ದೃಶ್ಯ ಮರುಸೃಷ್ಟಿ ಮುಗಿಸಿದ ನಂತರ ಆರೋಪಿಯನ್ನು ತನಿಖಾ ತಂಡ ಪುನಃ ಠಾಣೆಗೆ ಕರೆತಂದಿತು.
ಆರೋಪಿ ತನಿಖೆ ವೇಳೆ, ಅಮೆರಿಕದ ಕ್ರೈಮ್ ಶೋ ‘ಡೆಕ್ಸ್‌ಟರ್’ ಎಂಬ ಸರಣಿ ಹಂತಕನ ಕಥೆ ಆಧರಿತ ಧಾರಾವಾಹಿಯಿಂದ ಪ್ರೇರಿತನಾಗಿದ್ದಾಗಿ ಹೇಳಿದ್ದಾನೆ. ಶ್ರದ್ಧಾ ಮತ್ತು ಅಫ್ತಾಬ್ ಅವರನ್ನು ಬೆಸೆದ ಅಮೆರಿಕ ಮೂಲದ ಆನ್‌ಲೈನ್ ಡೇಟಿಂಗ್ ಆಯಪ್ ‘ಬಂಬಲ್’ನ ಅಧಿಕಾರಿಗಳನ್ನೂ ತನಿಖೆ ಭಾಗವಾಗಿ ಸಂಪರ್ಕಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.