ಕೈ ಕೋಟೆಯಲ್ಲಿ ಹೂ, ತೇನೆ ಕಾದಾಟ!

ಬಾಬುಅಲಿ ಕರಿಗುಡ್ಡ ದೇವದುರ್ಗ
ಒಂದು ಕಾಲದಲ್ಲಿ ಕಾಂಗ್ರೆಸ್ ಟಿಕೆಟ್ ಅಭ್ಯರ್ಥಿ ಘೋಷಣೆ ಆಗುತ್ತಿದಂತೆ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಗುಲಾಲು ಎರಚಿಕೊಂಡು ಕುಣಿದಾಡುವ ಕಾಲವಿತ್ತು. ಆದರೆ ಇದೀಗ ಅದು ಕಳಚುತ್ತಿದ್ದು, ‘ಹೂ’ಸುವಾಸನೆಯಲ್ಲಿ, ‘ತೇನೆ’ ಕಾಳು ಕಟ್ಟುವ ಸನ್ನಿಹದಲ್ಲಿದೆ.
ದೇವದುರ್ಗ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರ ಕೋಟೆ. ೧೯೫೭ರಲ್ಲಿ ವಿಧಾನ ಸಭೆ ಕ್ಷೇತ್ರವಾಗಿ ಘೋಷಣೆಯಾದ ಮೊದಲನೇ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲೇ ಕಾಂಗ್ರೆಸ್ ವಶವಾಯಿತು. ವಾರದ ಶಿವಣ್ಣ ಪಕ್ಷೇತರ ಅಭ್ಯರ್ಥಿ ಸಿದ್ದರಾಮಪ್ಪ ವಿರುದ್ಧ ೯೫೬೫ ಮತಗಳ ಅಂತರದಿಂದ ಗೆಲವು ಸಾಧಿಸುವ ಮೂಲಕ ಕೈ ಬುನಾದಿ ಹಾಕಿದರು. ೧೯೬೨ ಹಾಗೂ ೧೯೭೨ರಲ್ಲಿ ಶರಣಪ್ಪ ಅಂಚೆಸೂಗುರು ಎರಡು ಅವದಿಗೆ ಕಾಂಗ್ರೆಸ್ ಶಾಸಕರಾಗಿದ್ದರು. ನಂತರ ಎಸ್ಸಿ ಮೀಸಲಾತಿ ಕ್ಷೇತ್ರದಲ್ಲಿ ಬಿ.ಶಿವಣ್ಣ ೧೯೭೮, ೧೯೮೩ ಹಾಗೂ ೧೯೮೯ರಲ್ಲಿ ಶಾಸಕರಾಗಿ ಮೂರನೇ ಅವದಿಗೆ ಆಯ್ಕೆ ಆಗಿದ್ದರು. ೧೯೯೯ರಲ್ಲಿ ಯಲ್ಲಪ್ಪ ಅಕ್ಕರಕ್ಕಿ ಹಾಗೂ ೨೦೧೩ರಲ್ಲಿ ಎ.ವೆಂಕಟೇಶ ನಾಯಕ ಕಾಂಗ್ರೆಸ್ ಶಾಸಕರಾಗಿ ಆಯ್ಕೆ ಆದರು. ನಂತರದ ದಿನಗಳಲ್ಲಿ ಕಾಂಗ್ರೆಸ್ ಮೆಲ್ಲನೇ ಮಂಕಾಗುತ್ತದ ಬಂದಿದ್ದು, ಇದೀಗ ಕ್ಷೇತ್ರ ಕೈ ತಪ್ಪಿಸಿಕೊಳ್ಳುವ ಹಂತಕ್ಕೆ ಬಂದು ನಿಂತಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಕೈ ಹಿನ್ನಡೆಗೆ ಕಾರಣ:
ಕಾಂಗ್ರೆಸ್ ಟಿಕೆಟ್‌ಗಾಗಿ ಒಂದೇ ಕುಟುಂದ ಮೂವರು ಸದಸ್ಯರು ಅರ್ಜಿ ಸಲ್ಲಿಸಿದ್ದಾರೆ. ಬಿ.ವಿ. ನಾಯಕ ಅಂತಿಮ ಅಭ್ಯರ್ಥಿ ಎಂದು ಹೇಳಲಾಗುತ್ತಿದ್ದರೂ ಇಲ್ಲಿವರೆಗೆ ಅವರು ಎಲ್ಲಿ ತುಟಿ ಬಿಚ್ಚಿಲ್ಲ. ಶ್ರೀದೇವಿ ಆರ್ ನಾಯಕ ಪ್ರಚಾರದಲ್ಲಿ ತೋಡಗಿದ್ದರೂ ಕಾರ್ಯಕರ್ತರಲ್ಲಿ ಅಭ್ಯರ್ಥಿ ಗೊಂದಲ ನಿವಾರಣೆ ಆಗುತ್ತಿಲ್ಲ. ಹೀಗಾಗಿ ಕೈ ಕಾರ್ಯಕರ್ತರೇ ಗೊಂದಲದಲ್ಲಿ ಮನೆ ಮಾಡಿದ್ದು ಪಕ್ಷ ಸಂಘಟನೆಯಲ್ಲಿ ಕೈಗೆ ಹಿನ್ನಡೆ ಆಗುತ್ತಿದೆ.
ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಇಲ್ಲ ಹಾಲಿ ಶಾಸಕ ಕೆ. ಶಿವನಗೌಡ ನಾಯಕರೇ ಬಹುತೇಕ ಫೈನಲ್. ಮೇಲ್ನೋಟಕ್ಕೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ಸ್ಪರ್ಧೆ ಇದ್ದರೂ ನೇರ ನೇರ ಹಣಾಹಣಿ ಕೇಸರಿ, ತೇನೆ ಮಧ್ಯೆ ನಡೆಯಲಿದೆ. ಎರಡು ಪಕ್ಷದ ಅಭ್ಯರ್ಥಿಗಳು ಹಗಲಿರುಳು ಪಕ್ಷ ಸಂಘಟನೆಯಲ್ಲಿ ತೋಡಗಿದ್ದು ಕೈ ಖಾಲಿ ಮಾಡುತ್ತಿವೆ.
ಕೈ ಕೋಟೆಯಲ್ಲಿ ಕೇಸರಿ ತೇನೆ ಕಾದಾಟ:
ಜಾಲಹಳ್ಳಿ ಗ್ರಾಮದಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದ ವಿಜಯ ಸಂಕಲ್ಪಯಾತ್ರೆ ಕೈಗೊಂಡರು, ಮಾ.೨೬ರಂದು ಗಬ್ಬೂರು ಗ್ರಾಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿ ಪಕ್ಷದ ಇನ್ನಿತರ ಮುನ್ನಡೆ ಸಾಲಿನ ಮುಖಂಡ ಸಮ್ಮುಖದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಭರ್ಜರಿ ಚುನಾವಣೆ ತಾಲೀಮುಗೆ ಮುಂದಾಗಿದೆ.
ಇತ್ತ ಜೆಡಿಎಸ್ ಕೂಡ ತಾನೇನು ಕಡಿಮೆ ಎನ್ನುದ ದೃಷ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜಾಲಹಳ್ಳಿ ಗ್ರಾಮದಿಂದ ಅರಕೇರಾ ಮಾರ್ಗವಾಗಿ ಕೊತ್ತದೊಡ್ಡಿ, ದೇವದುರ್ಗ ಪಟ್ಟಣ ಸೇರಿ ತಾಲೂಕಿನ ಗಡಿ ಭಾಗವಾದ ಗಬ್ಬೂರು ಗ್ರಾಮದಲ್ಲಿ ಪಂಚರತ್ನ ಯಾತ್ರೆ ಭರ್ಜರಿ ರೋಡ್ ಶೋ ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಆದರೆ ಇಲ್ಲಿವರೆಗೆ ಕಾಂಗ್ರೆಸ್ ಯಾವದೊಂದು ಶಕ್ತಿ ಪ್ರದರ್ಶನ ಯಾತ್ರೆ ಕೈಗೊಂಡಿಲ್ಲ.