
ಕೊಟ್ರೇಶ್ ಉತ್ತಂಗಿ
ಕೊಟ್ಟೂರು, ಸೆ.02: ಮುಂಗಾರು ಮಳೆ ಸ್ವಲ್ಪ ತೇವಾಂಶ ಭರಿತವಾಗಿ ಸುರಿದ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ರೈತರು ಮೆಕ್ಕೆಜೋಳ, ಸೂರ್ಯಕಾಂತಿ, ಜೋಳ ಬಿತ್ತನೆ ಮಾಡಿದ್ದರು. ಮೊಳಕೆ ಹೊಡೆಯುವುದರ ಮಟ್ಟಕ್ಕೆ ಮಾತ್ರ ತೇವಾಂಶವಿತ್ತು, ಅಂದು ಸ್ವಲ್ಪ ಸುರಿದ ಮಳೆಯಿಂದಾಗಿ ಮೆಕ್ಕೆಜೋಳ, ಜೋಳ ಎದೆಯ ಮಟ್ಟ ಬೆಳೆಯಲು ಸಹಾಯಕರವಾಗಿತ್ತು ಅಂದಿನಿಂದ ಇಂದಿನವರೆಗೂ ಕೈಕೊಟ್ಟ ಮಳೆಯಿಂದಾಗಿ ಎಲ್ಲಾ ಬೆಳೆಗಳು ಒಣಗಲು ಆರಂಭಿಸಿವೆ.
ತಾಲೂಕಿನಾದ್ಯಂತ ಸುಮಾರು 80ರಷ್ಟು ಮೆಕ್ಕೆಜೋಳ ಬಿತ್ತನೆ ಮಾಡಿದ್ದು, 23,000 ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ 12,000 ಹೆಕ್ಟರ್ ಪ್ರದೇಶದಲ್ಲಿ ಈಗಾಗಲೇ ಮೆಕ್ಕೆಜೋಳ ಒಣಗಿ ಹೋಗಿದೆ. ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ರೈತರ ಸ್ಥಿತಿ ಹೇಳ ತೀರದಾಗಿದೆ. ಇನ್ನು ನೀರಾವರಿ ಪ್ರದೇಶದಲ್ಲಿ ಬೋರ್ವೆಲ್ ಮೂಲಕ ನೀರು ಹಾಯಿಸಿ ಬಿತ್ತನೆ ಮಾಡಿದ ಬೆಳೆಗಳನ್ನು ಉಳಿಸಿಕೊಳ್ಳಬೇಕೆಂದರೆ ವಿದ್ಯುತ್ ಪೂರೈಕೆಯ ಕಣ್ಣು ಮುಚ್ಚಲೆಯಿಂದಾಗಿ ರೈತರು ಹರಸಾಹಸ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ತೂಲಹಳ್ಳಿ ಭಾಗದಲ್ಲಿ ಈಗ ಮಳೆ ಬಂದರೆ ಸ್ವಲ್ಪ ಬೆಳೆಗಳು ರೈತರಿಗೆ ಕೈಗೆ ಸಿಗಬಹುದು ಮಳೆಬಾರದಿದ್ದರೆ ಅಲ್ಲಿಯೂ ಸಹ ಬೆಳೆಗಳು ಒಣಗಲಾರಂಭಿಸುತ್ತವೆ. ಇನ್ನು ಕಪ್ಪು ನೆಲವು ಹೆಚ್ಚಿನ ತೇವಾಂಶವನ್ನು ಹಿಡಿದು ಕೊಳ್ಳುತ್ತಿರುವುದರಿಂದ ಇಲ್ಲಿನ ಬೆಳೆಗಳು ಬಾಡಿದ ಮುಖಕ್ಕೆ ತಿರುಗಿವೆ. ಸ್ವಲ್ಪ ಮಟ್ಟದಲ್ಲಿ ಬೆಳೆಗಳು ಒಣಗಿವೆ ಕೆಲವೇ ದಿನಗಳಲ್ಲಿ ಮಳೆಬಾರದಿದ್ದರೆ ಅಲ್ಲಿಯೂ ಸಹ ಎಲ್ಲಾ ಒಣಗಿದ ಫಸಲನ್ನು ಕಡಿದು ದನಗಳಿಗೆ ಹಾಕುವಂತಹ ಪರಿಸ್ಥಿತಿಯನ್ನು ಉಂಟಾಗುವ ಸಂಭವವಿದೆ.
ಒಂದು ಎಕರೆ ಪ್ರದೇಶಕ್ಕೆ ಮೆಕ್ಕೆಜೋಳ ಬಿತ್ತನೆ ಮಾಡಲು ಕನಿಷ್ಠ 30ರಿಂದ 35,000 ಹಣ ಖರ್ಚಾಗುತ್ತದೆ ಮಳೆ ಬಾರದಿದ್ದರಿಂದ ಬೆಳೆ ಕೈಗೆ ಸಿಗದಿದಂತಾಗಿ ಒಣಗಿ ಹೋಗಿವೆ, ಬಿತ್ತನೆ ಮಾಡಿದ ಬೀಜ ಗೊಬ್ಬರ ಔಷಧಿಗೆಯೆಂದೇ ಮಾಡಿದ ಸಾಲವನ್ನು ತೀರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ ಎಂದು ರೈತರಾದ ಅಂಜಿನಪ್ಪ, ರಾಮಪ್ಪ, ನಾಗಪ್ಪ, ತಮ್ಮ ತೋಡಿಕೊಂಡರು.
ರೈತರು ಬಿತ್ತನೆ ಮಾಡಿದ ಬೀಜಗಳು ಮೊಳಕೆ ಹೊಡೆದು ಬೆಳೆಯುವ ಹಂತದಲ್ಲಿ ಮಳೆ ಕೈ ಕೊಟ್ಟಿದೆ, ಇದರಿಂದ ರೈತರು ಮಾಡಿದ ಖರ್ಚು ಸಹ ಬರಿ ಸದಂತಹ ಪರಿಸ್ಥಿತಿಯಲ್ಲಿದ್ದಾರೆ ಅದಕ್ಕಾಗಿ ಸರ್ಕಾರವು ಕೊಟ್ಟೂರು ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು
ಎನ್. ಭರ್ಮಣ್ಣ
ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ
ನಾವು ಈಗಾಗಲೇ ಒಣಗಿದ ಬೆಳೆಗಳ ಬಗ್ಗೆ ಜಿಪಿಎಸ್ ಸಮೀಕ್ಷೆಯನ್ನು ಮಾಡಿ ಜಿಲ್ಲಾಧಿಕಾರಿಗಳಿಗೆ ಕಳಿಸಿದ್ದೇವೆ, ಕೊಟ್ಟೂರು ತಾಲೂಕನ್ನು ಬರ ಪೀಡಿತ ಪ್ರದೇಶ ಘೋಷಣೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ರೈತರು ಬೆಳೆ ವಿಮೆ ಕಟ್ಟಿದರೆ ಬೆಳೆಗೆ ಪರಿಹಾರ ನೀಡಲಾಗುತ್ತದೆ
ಶ್ಯಾಮ್ ಸುಂದರ್
ಕೃಷಿ ಅಧಿಕಾರಿ ಕೊಟ್ಟೂರು