ಕೈ-ಕಾಲುಗಳ ಸಂವೇದನೆ ಕಳಕೊಂಡ ನವಾಲ್ನಿ!

ಮಾಸ್ಕೋ, ಎ,೮- ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ತೀವ್ರ ಟೀಕಾಕಾರ ಎಂದೇ ಗುರುತಿಸಿಕೊಂಡಿರುವ, ಸದ್ಯ ಜೈಲು ಪಾಲಾಗಿರುವ ಅಲೆಕ್ಸಿ ನವಾಲ್ನಿಯ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ ಎಂದು ಅವರ ವಕೀಲರು ಇದೀಗ ಬಹಿರಂಗಪಡಿಸಿದ್ದಾರೆ.
ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಕಳೆದ ವಾರ ಖುದ್ದು ನವಾಲ್ನಿ ಸರ್ಕಾರವನ್ನು ಆಗ್ರಹಿಸಿದ್ದರು. ಇದೀಗ ಅವರು ಕೈ-ಕಾಲುಗಳ ಸಂವೇದನೆಯನ್ನು ಕಳೆದುಕೊಂಡಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ. ನವಾಲ್ನಿ ಸದ್ಯ ವಾಕಿಂಗ್ ನಡೆಸುವಾಗ ಅವರಿಗೆ ವಿಪರೀತ ರೀತಿಯಲ್ಲಿ ನೋವಾಗುತ್ತಿದ್ದು, ಇತರೆ ಸಮಸ್ಯೆಗಳು ಕೂಡ ಕಾಡುತ್ತಿದೆ. ಮುಖ್ಯವಾಗಿ ನವಾಲ್ನಿ ಇರುವ ಕಡೆ ಯಾವುದೇ ಡಾಕ್ಟರ್ ಅಥವಾ ವೈದ್ಯರ ತಂಡವಾಗಲಿ ಇಲ್ಲ. ಕೇವಲ ಒಬ್ಬರು ಪ್ಯಾರಾಮೆಡಿಕಲ್ ಸಿಬ್ಬಂದಿ ಮಾತ್ರ ಇದ್ದಾರೆ. ನವಾಲ್ನಿ ಕಾಲು ಹಾಗೂ ಕೈಗಳ ಸಂವೇದನೆಯನ್ನು ಕಳೆದುಕೊಂಡಿದ್ದಾರೆ ಎಂದು ನವಾಲ್ನಿಯವರ ವಕೀಲ ಕೊಬ್ಝೆವ್ ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಹದಗೆಡುತ್ತಿರುವ ನವಾಲ್ನಿಯ ಪರಿಸ್ಥಿತಿಯ ಬಗ್ಗೆ ಈಗಾಗಲೇ ಅಮೆರಿಕಾ ಆತಂಕ ವ್ಯಕ್ತಪಡಿಸಿದೆ.