ಕೈ ಕಾರ್‍ಯಕರ್ತ ಮತ್ತಿರವಿ ಕೊಲೆ ೭ ಮಂದಿ ಸೆರೆ

ಬೆಂಗಳೂರು,ಮೇ.೨೯- ಚೌಡೇಶ್ವರಿನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರವಿ ಅಲಿಯಾಸ್ ಮತ್ತಿ ರವಿ ಕೊಲೆ ಪ್ರಕರಣದ ಸಂಬಂಧ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ನಂದಿನಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.ಲಗ್ಗೆರೆಯ ಪ್ರೇಮನಗರದ ಮಂಜುನಾಥ್ (೪೨) ನ್ಯೂ ರಿಂಗ್ ರಸ್ತೆಯ ನಾಗರಾಜ್ ಅಲಿಯಾಸ್ ಸ್ಪಾಟ್ ನಾಗ (೩೮) ರೆಸಿಡೆನ್ಸಿ ಲೇಔಟ್ ನ ಗೋಪಾಲ್ ಅಲಿಯಾಸ್ ಗೋಪಿ(೩೫) ಕಿರಣ್ ಕುಮಾರ್ (೨೯) ಚೌಡೇಶ್ವರಿ ನಗರದ ಮಣಿಕಂಠನ್ (೨೩)ಕಾರ್ತಿಕ್ (೩೪) ಹಾಗೂ ಬಾಬು ಅಲಿಯಾಸ್ ಹಾಸಿಗೆ ಬಾಬು(೩೫) ಬಂಧಿತ ಆರೋಪಿಗಳಾಗಿದ್ದಾರೆ.ಕಳೆದ ಮೇ.೨೪ ರ ರಾತ್ರಿ ೧೧ರ ವೇಳೆ ಲಗ್ಗೆರೆಯ ಚೌಡೇಶ್ವರಿ ನಗರದ ಹಳ್ಳಿ ರುಚಿ ಹೋಟೆಲ್ ಮುಂಭಾಗ ರವಿ ಅಲಿಯಾಸ್ ಮತ್ತಿ ರವಿಯನ್ನು ಬಂಧಿತ ಆರೋಪಿಗಳು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು.ಈ ಪ್ರಕರಣ ದಾಖಲಿಸಿ ತನಿಖೆಗಿಳಿದ ನಂದಿನಿ ಲೇಔಟ್ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ೭ ಮಂದಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.
ಮತ್ತಿರವಿ ವೃತ್ತಿಯಲ್ಲಿ ಟೆಂಪೋ ಟ್ರಾವೆಲರ್ ಚಾಲಕ ಹಾಗೂ ಮೇಕೆ ಸಾಕಾಣಿಕೆದಾರನಾಗಿದ್ದು. ಮೇ.೨೪ರ ಸಂಜೆ ಕೆಲಸ ಮುಗಿಸಿದ ಬಳಿಕ ಬಾರ್‌ನಲ್ಲಿ ಮದ್ಯ ಸೇವಿಸಿ ಅದೇ ಏರಿಯಾದ ಕೃಷ್ಣಮೂರ್ತಿ ಎಂಬ ಕಾಂಗ್ರೆಸ್ ಮುಖಂಡನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದ.
ಪಾರ್ಟಿ ಮುಗಿಸಿದ ಬಳಿಕ ಮನೆ ಕಡೆ ರವಿ ಹೊರಟಿದ್ದ,ಇದೇ ಸಮಯಕ್ಕೆ ಕಾದು ಕುಳಿತಿದ್ದ ಆರೋಪಿಗಳು ಬೈಕ್‌ನಲ್ಲಿ ಬಂದು ದಾಳಿ ನಡೆಸಿದ್ದರು. ತಪ್ಪಿಸಿಕೊಳ್ಳುವುದಕ್ಕಾಗಿ ರವಿ ಓಡಿದ್ದು, ಹಂತಕರು ಅಟ್ಟಾಡಿಸಿ ಹತ್ಯೆಗೈದಿದ್ದರು. ಅದಲ್ಲದೇ ಆತನ ತಲೆಯ ಮೇಲೆ ಸೈಜ್ ಕಲ್ಲು ಎತ್ತಾಕಿ ಪರಾರಿಯಾಗಿದ್ದರು.ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದು ಐದು ದಿನಗಳಲ್ಲಿ ಕೊಲೆಗಾರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.