ಕೈ-ಕಮಲ ಸದಸ್ಯರ ಮಧ್ಯೆ ಮಾತಿನ ಸಮರ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೩- ದೇಶದ ಎಲ್ಲ ಜನರ ಬ್ಯಾಂಕ್ ಖಾತೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ೧೫ ಲಕ್ಷ ರೂ. ಹಾಕುವುದಾಗಿ ಹೇಳಿದ್ದರು ಎಂಬ ವಿಚಾರ ವಿಧಾನಸಭೆಯಲ್ಲಿಂದು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಾತಿನ ಚಕಮಕಿಗೆ ಕಾರಣವಾಗಿ ಪ್ರಧಾನಿಗಳು ಹಾಗೆ ಹೇಳಿದ್ದರ ಬಗ್ಗೆ ದಾಖಲೆ ಕೊಡಿ. ಅವರು ಹಾಗೆ ಹೇಳಿದ್ದರೆ ನಾನು ರಾಜಕೀಯ ನಿವೃತ್ತಿಯಾಗಲು ಸಿದ್ದ ಎಂದು ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ ಪ್ರಸಂಗ ನಡೆಯಿತು.
ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಿದ್ದ ಕಾಂಗ್ರೆಸ್‌ನ ಕೋನರೆಡ್ಡಿ ಯವರು ಕಾಂಗ್ರೆಸ್ ಸರ್ಕಾರ ೫ ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ೧೫ ಲಕ್ಷ ರೂ. ಬ್ಯಾಂಕ್ ಖಾತೆಗೆ ಹಾಕುವುದಾಗಿ ಹೇಳಿದ್ದರು. ಇದುವರೆಗೂ ಹಣ ಬಂದಿಲ್ಲ ಎಂದು ಹೇಳಿದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿತು.
ಕೋನರೆಡ್ಡಿಯವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಸುಮ್ಮನೆ ಭಾಷಣ ಮಾಡಬೇಡಿ. ಪ್ರಧಾನಿಗಳು ೧೫ ಲಕ್ಷ ರೂ. ಹಾಕುವುದಾಗಿ ಹೇಳಿರುವ ಭಾಷಣದ ತುಣುಕ್ಕಿದ್ದರೆ ಕೊಡಿ. ಅವರು ಹಾಗೆ ಹೇಳಿದ್ದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಬೇಜವಾಬ್ದಾರಿಯಿಂದ ಮಾತನಾಡಬಾರದು. ದಾಖಲೆ ಕೊಡಿ ಒತ್ತಾಯಿಸಿದರು.ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬೆಂಬಲಕ್ಕೆ ಬಿಜೆಪಿಯ ಬಹುತೇಕ ಸದಸ್ಯರು ನಿಂತು ದಾಖಲೆ ಇಲ್ಲದೆ ಮಾತನಾಡಬೇಡಿ, ದಾಖಲೆ ಇದ್ದರೆ ಕೊಡಿ ಎಂದು ಪಟ್ಟು ಹಿಡಿದರು.ಈ ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು.
ಈ ಗದ್ದಲದ ನಡುವೆಯೇ ಮಾತನಾಡಿದ ಸಚಿವ ರಾಜಣ್ಣ ಅವರು ಪ್ರಧಾನಿಗಳು ಆ ರೀತಿ ಹೇಳಿರುವುದು ದೇಶಕ್ಕೇ ಅಲ್ಲ, ಇಡೀ ಪ್ರಪಂಚಕ್ಕೆ ಗೊತ್ತಿದೆ. ಈ ರೀತಿ ನೀವು ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿ, ಯತ್ನಾಳ್ ಅವರೇ ನೀವು ಹೀಗೆಲ್ಲ ಮಾತನಾಡಿದರೆ ನಿಮ್ಮನ್ನು ವಿಪಕ್ಷ ನಾಯಕ ಮಾಡುತ್ತಾರೆ ಎಂದುಕೊಂಡಿದ್ದೀರಾ, ಅದು ಆಗಲ್ಲ ಎಂದು ಮಾತಿನ ಬಾಣ ಬಿಟ್ಟರು.ಸಚಿವ ರಾಜಣ್ಣನವರ ಮಾತಿನಿಂದ ಕೆರಳಿದ ಬಿಜೆಪಿ ಸದಸ್ಯರು, ದಾಖಲೆ ಇಲ್ಲದೆ ಮಾತನಾಡಬೇಡಿ, ಪ್ರಧಾನಿಗಳು ಎಲ್ಲೂ ಆ ರೀತಿ ಹೇಳಿಲ್ಲ ಎಂದರು.ನೀವು ದಾಖಲೆ ಕೊಟ್ಟರೆ ನಾನು ಪ್ರಧಾನಿಗಳನ್ನೆ ಈ ಬಗ್ಗೆ ಕೇಳುತ್ತೇನೆ. ನಮ್ಮಲ್ಲಿ ಅಷ್ಟು ಪ್ರಜಾತಂತ್ರವಿದೆ. ನನಗೂ ತಾಕತ್ತು ಇದೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಸದಸ್ಯರಿಗೆ ತಿರುಗು ಬಾಣ ಬಿಟ್ಟರು.ಆಗ ಕಾಂಗ್ರೆಸ್ ಅಬ್ಬಯ್ಯ ಪಸಾದ್ ಜಿಎಸ್‌ಟಿ ದುಡ್ಡು ಕೇಳಲು ನಿಮಗೆ ಆಗಿಲ್ಲ. ಇನ್ನು ಇದನ್ನು ಕೇಳುತ್ತೀರಾ ಎಂದರು.ಈ ನಡುವೆ ಮಾತನಾಡಿದ ಬಿಜೆಪಿಯ ಬಿ.ವೈ. ವಿಜಯೇಂದ್ರ ಅವರು, ಸದನದಲ್ಲಿ ಪದೇ ಪದೇ ಕಾಂಗ್ರೆಸ್‌ನವರು ೧೫ ಲಕ್ಷ ರೂ. ಪ್ರಧಾನಿಗಳು ಹಾಕುತ್ತೇನೆ ಎಂದು ಹೇಳಿದ್ದರು ಎಂಬ ಮಾತುಗಳನ್ನು ದಾಖಲೆ ಇಲ್ಲದೆ ಆಡುತ್ತಿದ್ದಾರೆ. ಈ ಮಾತುಗಳನ್ನು ಕಡತದಿಂದ ತೆಗೆಸಿ ಹಾಕಬೇಕು ಎಂದರು.
ಮತ್ತೆ ಮಾತು ಮುಂದುವರೆಸಿದ ಕೋನರೆಡ್ಡಿ, ನಾನು ಸತ್ಯ ಹೇಳಿದ್ದೇನೆ ಎಂದಾಗ ಬಿಜೆಪಿ ಸದಸ್ಯರು ಒಮ್ಮೆಲೆ ಎದ್ದುನಿಂತು ಕೋನರೆಡ್ಡಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿಯ ಯಶಪಾಲ್ ಅವರು ನೀವು ಹೀಗೆಲ್ಲ ಮಾತನಾಡುವುದು ಸರಿಯಲ್ಲ ಎಂದಾಗ ಕೋನರೆಡ್ಡಿ ನಾನು ನಿಮ್ಮನ್ನು ಕೇಳಿ ಮಾತನಾಡಬೇಕಿಲ್ಲ ರೀ.. ನಾನು ಹೋರಾಟ ಮಾಡಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿ, ಅಮಿತ್ ಶಾ ಅವರು ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಸುಳ್ಳು ಹೇಳಿದ್ದೆವು ಎಂದಿದ್ದರು ಇದು ಕರೆ ಅಲ್ಲವೇ, ಬಸವನಗೌಡ ಪಾಟೀಲರೇ ಯಡಿಯೂರಪ್ಪನವರನ್ನು ನೀವು ಟೀಕೆ ಮಾಡಿರಲಿಲ್ಲವೇ. ವರ್ಗಾವಣೆ ದರ ಕಾರ್ಡ್ ಪ್ರದರ್ಶಿಸಿರಲಿಲ್ಲವೇ, ಸಿಎಂ ಆಗಲು ೨೫೦೦ ಕೋಟಿ ರೂ. ಬೇಕು ಎಂದು ಹೇಳಿರಲಿಲ್ಲವೇ ಎಂದು ಹೇಳಿದ್ದು ಮತ್ತೆ ಮಾತಿನ ಚಕಮಕಿಗೆ ಕಾರಣವಾಗಿ ಬಸವನಗೌಡ ಪಾಟೀಲ್ ದರ ಕಾರ್ಡ್ ನಾನು ಬಿಡುಗಡೆ ಮಾಡಿಲ್ಲ. ನಿನ್ನೆ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವುದು. ಏನನ್ನೋ ಮಾತನಾಡಬೇಡಿ ಎಂದರು.ಆಗ ಬಿಜೆಪಿಯ ಚನ್ನಬಸಪ್ಪ ಅವರು, ಪ್ರಧಾನಿಗಳು ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದು. ೧೫ ಲಕ್ಷ ಹಾಕುತ್ತೇವೆ ಎಂದಲ್ಲ ಎಂದು ಹೇಳಿದಾಗ, ಎದ್ದುನಿಂತ ಸಚಿವ ಕೆ.ಜೆ. ಜಾರ್ಜ್ ಕಪ್ಪು ಹಣ ತಂದಿದ್ದೀರಾ, ೯ ವರ್ಷದಲ್ಲಿ ಎಷ್ಟು ಕಪ್ಪು ಹಣ ತಂದಿದ್ದೀರಾ ಎಂದು ಪ್ರಶ್ನಿಸಿದರು.
ಸದನದಲ್ಲಿ ವಿಷಯಾಂತರ ಆಗುತ್ತಿರುವುದನ್ನು ಗಮನಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ಕೋನರೆಡ್ಡಿಯವರೇ ನೀವು ನನ್ನನ್ನು ನೋಡಿಕೊಂಡು ಮಾತನಾಡಿ, ಊರಿಡಿ ನೋಡಿಕೊಂಡು ಮಾತನಾಡಬೇಡಿ ಎಂದು ಹೇಳಿ, ಮಾತಿನ ಚಕಮಕಿಗೆ ತೆರೆ ಎಳೆದರು.