ಕೈ ಒತ್ತಡಕ್ಕೆ ಮಣಿದು ಎಲ್‌ಪಿಜಿ ದರ ಇಳಿಕೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೩೦:ಕಾಂಗ್ರೆಸ್‌ನ ಒತ್ತಡಕ್ಕೆ ಮಣಿದು ಪ್ರಧಾನಿ ನರೇಂದ್ರಮೋದಿ ಅವರು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ೨೦೦ರೂ.ಗೆ ಇಳಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹೆಣ್ಣು ಮಕ್ಕಳು ಕರ್ನಾಟಕದ ಮಾದರಿಯನ್ನು ನೋಡುತ್ತಿದ್ದಾರೆ, ನಮ್ಮ ಮಾದರಿಯನ್ನೇ ಇಟ್ಟುಕೊಂಡು ಪ್ರಧಾನಿ ಮೋದಿ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ೨೦೦ ರೂ. ಇಳಿಸಿದ್ದಾರೆ. ನಾವು ಅಡುಗೆ ಅನಿಲ ಸಿಲಿಂಡರ್‌ನ್ನು ೫೦೦ ರೂ.ಗೆ ಕೊಡಬೇಕು ಎಂದು ಹೇಳಿದ್ದೆವು. ನಾವು ಈಗ ಹೆಣ್ಣು ಮಕ್ಕಳಿಗೆ ೨ ಸಾವಿರ ರೂ. ಕೊಡುತ್ತಿದ್ದೇವೆ. ನಾಡಿನ ಹೆಣ್ಣು ಮಕ್ಕಳ ಮನೆಗೆ ಈ ಹಣ ತಲುಪುತ್ತಿದೆ ಎಂದರು.ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಹೇಳಿದ್ದಾರೆ. ಆದರೆ ಮಧ್ಯಪ್ರದೇಶದಲ್ಲು ಅವರು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರಲ್ಲ ಇಡೀ ದೇಶಕ್ಕೆ ಕರ್ನಾಟಕದ ಯೋಜನೆಗಳು ಮಾದರಿಯಾಗಿವೆ ಎಂದರು. ೧೦೦ ದಿನದಲ್ಲಿ ಕಾಂಗ್ರೆಸ್ ಸರ್ಕಾರ ೪ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ನುಡಿದಂತೆ ನಡೆದಿದೆ ಎಂದರು.
ದಾಖಲೆ ಕೊಡಲಿ
ಬಿಜೆಪಿ ನಿನ್ನೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಪಟ್ಟಿ ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಾಖಲೆ ಇಲ್ಲದೆ ಆರೋಪಗಳನ್ನು ಮಾಡಿದರೆ ಜನ ನಂಬಲ್ಲ, ೧೦೦ ದಿನಗಳಾದರೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಬಿಜೆಪಿಯವರಿಗೆ ಆಗಿಲ್ಲ. ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಹಿಂದೆ ಗುತ್ತಿಗೆದಾರರನ್ನು ಎತ್ತಿಕಟ್ಟಿ ಶೇ. ೧೦ರಷ್ಟು ಕಮಿಷನ್ ಆರೋಪವನ್ನು ನನ್ನ ಮೇಲೆ ಮಾಡಿದ್ದರು. ರಾಜ್ಯಪಾಲರಿಗೆ ದೂರು ಕೊಡಿಸಿದರು. ನಂತರ ಗುತ್ತಿಗೆದಾರರಳೆ ಬಿಜೆಪಿ ಜೆಡಿಎಸ್‌ನವರು ನಮ್ಮ ಮೇಲೆ ಒತ್ತಡ ತಂದು ಈ ರೀತಿ ಮಾಡಿದರು ಎಂದು ಹೇಳಿದರು. ಆರೋಪಪಟ್ಟಿಯಲ್ಲಿ ಏನು ಇಲ್ಲ, ಬಿಜೆಪಿ ಕಾಲದ ಹಗರಣಗಳನ್ನು ಬಿಚ್ಚಿಡುತ್ತೇವೆ ಎಂದರು.
ರೈತರ ಹಿತ ಕಾಯಲು ಬದ್ಧ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ನಮ್ಮ ರಾಜ್ಯದ ಹಿತ ಕಾಯಲು ಬದ್ಧ, ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಇದೆ. ನಾನು ದೆಹಲಿಗೆ ಹೋಗುತ್ತಿದ್ದೇನೆ. ರಾಜ್ಯದ ಪರ ವಕೀಲರು ಒಳ್ಳೆ ವಾದ ಮಾಡಿ ಕಾವೇರಿ ಉಸ್ತುವಾರಿ ಸಮಿತಿ ಈ ಹಿಂದೆ ಮಾಡಿದ ಆದೇಶವನ್ನು ಬದಲಿಸಿ ೫ ಸಾವಿರ ಕ್ಯೂಸೆಕ್ ನೀರು ಬಿಡುವ ತೀರ್ಮಾನ ಮಾಡಿಸಿದ್ದಾರೆ. ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ರಾಜ್ಯದ ಪರ ವಕೀಲರು ಸುಪ್ರೀಂಕೋರ್ಟ್‌ಗೆ ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡುವರು ಎಂದರು.