ಕೈ ಆಡಳಿತಕ್ಕೆ ಮೋದಿ ಚಾಟಿ

ಬೆಳಗಾವಿ,ಏ.೨೮-ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕಾಂಗ್ರೆಸ್ ಸರ್ಕಾರ ಜನರ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿರುವ ಪ್ರಧಾನಮಂತ್ರಿ ನರೇಂದ್ರಮೋದಿ, ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿಂದು ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಚಿಕ್ಕೋಡಿಯಲ್ಲಿ ಜೈನ ಮುನಿ ಹತ್ಯೆ, ಬೆಳಗಾವಿಯಲ್ಲಿ ನಡೆದ ಮಹಿಳೆ ಮೇಲಿನ ದೌರ್ಜನ್ಯ, ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ, ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್‌ಸ್ಫೋಟ ಪ್ರಕರಣ ಎಲ್ಲವನ್ನೂ ಪ್ರಸ್ತಾಪಿಸಿ ದೇಶದಲ್ಲಿ ಈ ಘಟನೆಗಳು ಆತಂಕ ಮೂಡಿಸಿದೆ. ಕಾಂಗ್ರೆಸ್ ಸರ್ಕಾರವು ತುಷ್ಠೀಕರಣದ ಕಡೆ ಗಮನ ಕೊಡುತ್ತಿದೆಯೇ ಹೊರತು ನೇಹಾಳ ಬಗ್ಗೆ ಕಾಂಗ್ರೆಸ್‌ಗೆ ಕಳಕಳಿ ಇಲ್ಲ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿ ಬಾಂಬ್‌ಸ್ಫೋಟ ಸಂಭವಿಸಿದೆ. ಇಡೀ ರಾಜ್ಯದಲ್ಲೇ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕಾಂಗ್ರೆಸ್ ಪಕ್ಷವು ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಲಿ ಎಂದು ಪ್ರಧಾನಿಗಳು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ಮತಕ್ಕಾಗಿ ದೇಶ ವಿರೋಧಿ ಶಕ್ತಿಗಳ ಜತೆ ಕೈ ಜೋಡಿಸಿದೆ. ಪಿಎಫ್‌ಐನಂತಹ ಸಂಘಟನೆಗಳ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಪಕ್ಷ ಕಾಂಗ್ರೆಸ್, ಆದರೆ ಬಿಜೆಪಿ ಪಿಎಫ್‌ಐನ್ನು ನಿಷೇಧಿಸಿದ ಪಕ್ಷ ಎಂದರು.
ಬಿಜೆಪಿ ದೇಶ ಮತ್ತು ಬಿಜೆಪಿ ಸರ್ಕಾರ ದೇಶ ಮತ್ತು ಸಮಾಜ ವಿರೋಧಿ ಶಕ್ತಿಗಳಿಗೆ ಸಿಂಹ ಸ್ವಪ್ನವಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ತುಷ್ಠೀಕರಣ ಮಾಡುತ್ತಿದೆ. ಆ ಪಾಪ ಕಾಂಗ್ರೆಸ್ ಪಕ್ಷವನ್ನು ಕಾಡದೇ ಬಿಡಲಾರದು ಎಂದು ಹೇಳಿದ್ಧಾರೆ.
ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕಾರಣ
ಕಾಂಗ್ರೆಸ್ ಪಕ್ಷವು ಕುಟುಂಬವಾದದಲ್ಲಿ ದೇಶದ ಹಿತವನ್ನು ಮರೆತಿದೆ ಎಂದು ವಾಗ್ದಾಳಿ ನಡೆಸಿ, ಕಾಂಗ್ರೆಸ್ ಅಧಿಕಾರ ಎಂದರೆ ಅಭಿವೃದ್ಧಿ ಹೀನಸ್ಥಿತಿ ಎಂದು ಜನತೆ ಅರ್ಥ ಮಾಡಿಕೊಂಡಿದ್ದಾರೆ. ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ವಿದೇಶಿ ಹೂಡಿಕೆ, ಕರ್ನಾಟಕದಲ್ಲಿ ಗರಿಷ್ಠ ಮಟ್ಟದಲ್ಲಿತ್ತು.ಕಾಂಗ್ರೆಸ್ ಅಧಿಕಾರದಲ್ಲಿ ಅಭಿವೃದ್ಧಿ ಶೂನ್ಯ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಎಂದರೆ ದಿವಾಳಿ ಪರಿಸ್ಥಿತಿ ಎಂದು ಜನರಿಗೆ ಗೊತ್ತಾಗಿದೆ ಎಂದರು.
ಮಂಗಳ ಸೂತ್ರ ಹೋಗಲಿದೆ
ಕಾಂಗ್ರೆಸ್ಸಿಗರು ನಿಮ್ಮ ಬ್ಯಾಂಕಿನ ಹಣ,ಆಸ್ತಿ ಮಹಿಳೆಯರ ಬಳಿ ಇರುವ ಒಡವೆ ಎಲ್ಲವನ್ನೂ ಎಕ್ಸ್‌ರೇ ಮಾಡಲಿದ್ದಾರೆ. ಮಂಗಳಸೂತ್ರವನ್ನೂ ಲಪಟಾಯಿಸುವ ಸಂಚು ನಡೆಸಿದ್ದಾರೆ. ಮುಂದೆ ನಿಮ್ಮ ಸಂಪತ್ತನ್ನು ಲೂಟಿ ಮಾಡಿ ಅದನ್ನು ಕಾಂಗ್ರೆಸ್‌ನ ಮತ ಬ್ಯಾಂಕ್‌ಗೆ ಕೊಡಲಿದ್ದಾರೆ. ಎಚ್ಚರ ಎಂದ ಪ್ರಧಾನಿ ನರೇಂದ್ರಮೋದಿ, ಈ ಮೋದಿ ಬದುಕಿರುವವರೆಗೂ ಕಾಂಗ್ರೆಸ್‌ನ ಈ ಕನಸು ನನಸಾಗದು, ಅವರ ಆಟ ನನ್ನ ಮುಂದೆ ನಡೆಯಲ್ಲ ಎಂದು ಗುಡುಗಿದರು.
ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಹೊಸ ನೀತಿ ತರಲು ಕಾಂಗ್ರೆಸ್ ಮುಂದಾಗಿದೆ. ಮಕ್ಕಳಿಗಾಗಿ ನೀವು ಕೂಡಿಟ್ಟ ಹಣ, ಆಸ್ತಿಯನ್ನು ಅವರಿಗೆ ಕೊಡಲು ಸಾಧ್ಯವಾಗದು. ಅದನ್ನು ಮಕ್ಕಳಿಗೆ ಕೊಡಲು ಶೇ. ೫೫ರಷ್ಟು ತೆರಿಗೆ ಪಾವತಿಸಲು ಕಾಂಗ್ರೆಸ್ ಕೇಳಲಿದೆ. ಇವರನ್ನು ಅವರ ಮತ ಬ್ಯಾಂಕಿಗೆ ಹಂಚಲು ನಿಮ್ಮ ಸಂಪತ್ತನ್ನು ಡಕಾಯಿತಿ ಮಾಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್‌ನ ಈ ನೀತಿಯನ್ನು ವಿರೋಧಿಸಿ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಿ ಎಂದು ಮೋದಿ ಕರೆ ನೀಡಿದರು. ಜನರ ಕನಸೇ ಬಿಜೆಪಿ ಸಂಕಲ್ಪ, ದೇಶಕ್ಕಾಗಿ ದಿನದ ೨೪ ಗಂಟೆಯೂ ದುಡಿಯುತ್ತೇನೆ. ೨೦೪೭ರ ವಿಕಸಿತ ಭಾರತದ ಸಂಕಲ್ಪವನ್ನೂ ಈಡೇರಿಸುತ್ತೇನೆ. ಇದಕ್ಕಾಗಿ ಕರ್ನಾಟಕದ ಜನರ ಆರ್ಶೀವಾದ ಕೇಳಲು ಬಂದಿದ್ದೇನೆ. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ಕಮಲದ ಚಿಹ್ನೆಗೆ ನೀಡಿದ ಮತ ಮೋದಿಗೆ ಹೋಗಲಿದೆ. ಮೋದಿಯನ್ನು ಸಶಕ್ತಗೊಳಿಸಿ ಬಿಜೆಪಿಗೆ ಮತ ಹಾಕಿ ಎಂದು ಪ್ರಧಾನಿ ಅವರು ಮನವಿ ಮಾಡಿದರು.
ಭಗವಾನ್ ಬಸವೇಶ್ವರರು ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸಿಕೊಟ್ಟರು, ಭಗವಾನ್ ಬಸವೇಶ್ವರರನ್ನು ಛತ್ರಪತಿ ಶಿವಾಜಿ ಮಹಾರಾಜರನ್ನು ಗೌರವಿಸುವವರು ನಾವು, ಭಾರತವನ್ನು ಶಕ್ತಿಶಾಲಿ ಮಾಡುತ್ತೇನೆ ಎಂದು ಮೋದಿ ಹೇಳಿದರು.
ಕಳೆದ ೧೦ ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಬಿಡಿಸಿಟ್ಟ ಪ್ರಧಾನಿ ಮೋದಿ ಅವರು, ೨೫ ಕೋಟಿ ಜನರು ಬಿಪಿಎಲ್ ರೇಖೆಯಿಂದ ಮೇಲೆ ಬಂದಿದ್ದಾರೆ ಇದು ನಮ್ಮ ಸರ್ಕಾರದ ಸಾಧನೆ ಎಂದರು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಯಾಗಲಿದೆ. ಮಹಿಳೆಯರ ರಕ್ಷಣೆ ನಮ್ಮ ಬದ್ಧತೆ ಎಂದು ಹೇಳಿದ ಪ್ರಧಾನಿ ಮೋದಿ, ಸ್ವತಂತ್ರ ಚಳವಳಿಯನ್ನು ಮತ ಬ್ಯಾಂಕಿಗಾಗಿ ತುಷ್ಠೀಕರಣದ ಚರಿತ್ರೆಯನ್ನಾಗಿ ಮಾಡಿದ ಪಕ್ಷ ಕಾಂಗ್ರೆಸ್, ಭಾರತದ ಮಹಾರಾಜರು, ಅತ್ಯಾಚಾರಿಗಳು ಬಡವರ ಜಮೀನನ್ನು ಕಿತ್ತುಕೊಂಡವರು ಎಂದು ಚರಿತ್ರೆ ಬರೆಸಿದ್ದರು. ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚೆನಮ್ಮನವರನ್ನು ಅವಮಾನಮಾಡಿದ ಪಕ್ಷ ಕಾಂಗ್ರೆಸ್, ನಿಜವಾಗಿ ನವಾಬರು, ನಿಜಾಮರು, ಸುಲ್ತಾನರು ಅತ್ಯಾಚಾರ ಮಾಡಿದವರು ಎಂದು ಪ್ರಧಾನಿ ಮೋದಿ ಆರೋಪಿಸಿದರು.
ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಬಿಜೆಪಿ ಅಭ್ಯರ್ಥಿಗಳಾದ ಜಗದೀಶ್‌ಶೆಟ್ಟರ್, ಅಣ್ಣಾಸಾಹೇಬ್‌ಜೊಲ್ಲೆ, ಸಂಸದ ಮಂಗಳ ಅಂಗಡಿ, ಮಾಜಿ ಸಂಸದರಾದ ಡಾ. ಪ್ರಭಾಕರ ಕೋರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಾಕ್ಸ್
೨೮ ಕ್ಷೇತ್ರಗಳಲ್ಲಿ ಗೆಲುವು ಬಿಎಸ್‌ವೈ
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಳೆದ ೧೦ ವರ್ಷದಲ್ಲಿ ಪ್ರಧಾನಿಯಾದ ಮೇಲೆ ನಿರಂತರವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಆಗಮಿಸಿರುವುದು ಹುರುಪು ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿ ರಾಜ್ಯ ಸರ್ಕಾರ ನೀಡುತ್ತಿದ್ದ ೪ ಸಾವಿರ ನಿಲ್ಲಿಸಿದೆ. ಈ ಸರ್ಕಾರವನ್ನೇ ಕಿತ್ತೊಗೆಯಿರಿ ಎಂದು ಕರೆ ನೀಡಿದರು.
ಮೊದಲ ಹಂತದಲ್ಲಿ ೧೪ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಗೆಲ್ಲಲಿವೆ. ಮುಂದಿನ ಹಂತದಲ್ಲಿ ೧೪ ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ಈ ಮೂಲಕ ೨೮ ಕ್ಷೇತ್ರಗಳನ್ನು ಗೆದ್ದು ಪ್ರಧಾನಿಗೆ ಉಡುಗೊರೆ ನೀಡಲಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವವೇ ಮೆಚ್ಚುವ ನಾಯಕ. ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರದ ಮೇಲೆ ನಿಮ್ಮ ಆಶೀರ್ವಾದ ಇರಲಿ ಎರಡೂ ಕ್ಷೇತ್ರ ಗೆಲ್ಲಿಸಿ ಕಳುಹಿಸುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದರು.