ಕೈ ಅಭ್ಯರ್ಥಿ ಆಯ್ಕೆ ಕಗ್ಗಂಟು ಪರಿಷತ್ ಸಮರ

ಬೆಂಗಳೂರು, ನ. ೨೨- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆ ಕುರಿತಂತೆ ಪ್ರತಿಪಕ್ಷ ಕಾಂಗೆಸ್ ನಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಿಮಿಸಿದೆ. ಕೆಲವೊಂದು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು ಇಂದು ರಾತ್ರಿ ವೇಳೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಉಮೇದುವಾರಿಕೆ ಸಲ್ಲಿಸಲು ನಾಳೆ ಕಡೆಯ ದಿನವಾಗಿದ್ದು, ಕೈ ಪಾಳೆಯದಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿಲ್ಲ. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಸಲ್ಲಿಸಿದ್ದಾರೆ.
ಇದರ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರuದೀಪ್ ಸುರ್ಜೇವಾಲಾ ಹಾಗೂ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಭೇಟಿ ಮಾಡಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸಿದ್ದರು.
ಆದರೆ ಕೋಲಾರ, ಬಳ್ಳಾರಿ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗದಿರಲು ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದೇ ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಲು ಹೈಕಮಾಂಡ್ ಲೆಕ್ಕಚಾರದಲ್ಲಿದ್ದು, ಇದಕ್ಕಾಗಿಯೇ ತಡೆಹಿಡಿಯಲಾಗಿದೆ. ರಣದೀಪ್ ಸುರ್ಜೇವಾಲಾ ಸೋನಿಯಾರನ್ನು ಭೇಟಿ ಚರ್ಚೆ ನಡೆಸಿದ್ದಾರೆ. ಮೂಲಗಳ ಪ್ರಕಾರ ರಾತ್ರಿ ವೇಳೆಗೆ ಪಟ್ಟಿ ಬಿಡುಗಡೆಯಗುವ ನಿರೀಕ್ಷೆಯಿದೆ.
ಬೆಂಗಳೂರು ಗ್ರಾಮಾಂತರದಿಂದ ಎಸ್. ರವಿ, ಶಿವಮೊಗ್ಗದಿಂದ ಪ್ರಸನ್ನಕುಮಾರ್, ಚಿಕ್ಕಮಗಳೂರಿನಿಂದ ಗಾಯಿತ್ರಿ ಶಾಂತೆಗೌಡ, ತುಮಕೂರಿನಿಂದ ರಾಜೇಂದ್ರ, ಚಿತ್ರದುರ್ಗ- ದಾವಣಗೆರೆಯಿಂದ ಸೋಮಶೇಖರ್, ಮಂಡ್ಯದಿಂದ ದಿನೇಶ್ ಗೂಳಿಗೌಡ ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗಿದೆ.