ಕೈ ಅಭ್ಯರ್ಥಿಗಳ ಮೇಲೆ ಐಟಿ ದಾಳಿಗೆ ಸಂಚು

ಬೆಂಗಳೂರು,ಏ,೩೦:ಬಿಜೆಪಿಯವರು ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹತಾಶರಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಆದಾಯ ತೆರಿಗೆ ಮತ್ತು ಲೋಕಾಯುಕ್ತ ದಾಳಿಗೆ ಸಂಚು ನಡೆಸಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯ ತಮ್ಮ ನಿವಾಸದಲ್ಲಿಂದು ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಚುನಾವಣೆ ಗೆಲ್ಲಲು ವಾಮಮಾರ್ಗ ಹಿಡಿದಿದ್ದಾರೆ. ಕಾಂಗ್ರೆಸ್‌ನ ೫೦ ಅಭ್ಯರ್ಥಿಗಳು ಮತ್ತು ಅವರ ಸಂಬಂಧಿಕರ ಮೇಲೆ ಐಟಿ, ಲೋಕಾಯುಕ್ತ ದಾಳಿಗಳನ್ನು ನಡೆಸಲು ಸಂಚು ನಡೆಸಿದ್ದಾರೆ. ಒಂದೆರೆಡು ದಿನಗಳಲ್ಲಿ ಈ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಬಿಜೆಪಿ ವಿರೋಧ ಪಕ್ಷಗಳನ್ನು ಮಣಿಸಲು ವಾಮಮಾರ್ಗ ಅನುಸರಿಸುತ್ತಿದೆ. ಅವರು ಏನು ಮಾಡುತ್ತಿದ್ದಾರೋ ಅದು ಅವರಿಗೆ ತಿರುಗುಬಾಣ ಆಗುತ್ತೆ ಎಂದು ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ, ಬೆಳಗಾವಿ ಜಿಲ್ಲೆಯಲ್ಲೂ ಕಾಂಗ್ರೆಸ್‌ಗೆ ಒಳ್ಳೆಯ ವಾತಾವರಣವಿದೆ. ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಗಳು ಜನರಿಗೆ ಮೆಚ್ಚಿಗೆ ಆಗಿದೆ. ಜನ ಕಾಂಗ್ರೆಸ್ ಸರ್ಕಾರವನ್ನು ತರಲು ಬಯಸಿದ್ದಾರೆ ಎಂದರು.