ಕೈ ಅಧ್ಯಕ್ಷ ಪಟ್ಟಕ್ಕೆ ಗೆಲ್ಹೋಟ್-ಶಶಿ ಪೈಪೋಟಿ

ನವದೆಹಲಿ,ಸೆ.೧೫- ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ತಿಂಗಳು ೧೭ ರಂದು ನಡೆಯುವ ಚುನಾವಣೆಯಲ್ಲಿ ಅಧ್ಯಕ್ಷ ಪಟ್ಟವನ್ನು ಯಾರು ಅಲಂಕರಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಶಶಿತರೂರ್ ಹಾಗೂ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್‌ರವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿ ಬರುತ್ತಿದೆ.
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿ ನಾಳೆ ನವದೆಹಲಿಗೆ ವಾಪಸ್ ಆಗಲಿದ್ದಾರೆ. ಈ ಸಂಬಂಧ ಮುಂದಿನ ಕೆಲವು ದಿನಗಳಲ್ಲಿ ಪಕ್ಷದಲ್ಲಿ ಅಧ್ಯಕ್ಷರ ಆಯ್ಕೆ ಕುರಿತು ಸರಣಿ ಸಭೆಗಳು ನಡೆಯಲಿವೆ.
ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವ ಹೊತ್ತಲ್ಲೆ ಸಂಸದ ರಾಹುಲ್‌ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೊ ಯಾತ್ರೆ ಕೈಗೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸೋನಿಯಾ ಅವರು ವಾಪಸ್ ಬಂದ ಬಳಿಕ ಪಕ್ಷದ ಮುಖಂಡರ ಜತೆ ಚರ್ಚಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ.
ಜಿ-೨೩ ನಾಯಕರ ಗುಂಪಿನ ಸದಸ್ಯರಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿತರೂರ್, ಅಧ್ಯಕ್ಷರ ಚುನಾವಣೆ ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಬೇಕೆಂದು ಚುನಾವಣಾ ಸಮಿತಿ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರಿಗೆ ಪತ್ರ ಬರೆದಿದ್ದರು. ಈಗ ಶಶಿತರೂರ್ ಅವರೇ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ನಾಳೆ ವಾಪಸ್ಸಾಗಲಿರುವ ಸೋನಿಯಾ ಅವರನ್ನು ಶಶಿತರೂರ್ ಭೇಟಿಯಾಗಲಿದ್ದಾರೆ. ಇದರ ಜತೆಗೆ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಲು ಮುಂದಾಗಿದ್ದಾರೆ.ಮೂಲಗಳ ಪ್ರಕಾರ ಸಾಂಸ್ಥಿಕ ಚುನಾವಣೆಗಳಲ್ಲಿ ಗಾಂಧಿ ಕುಟುಂಬ ಬೆಂಬಲ ವ್ಯಕ್ತಪಡಿಸಿದ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಜಿ-೨೩ ನಾಯಕರು ಅಂತಿಮಗೊಳಿಸಲಿದ್ದಾರೆ, ಈ ತಿಂಗಳ ೨೪ ಮತ್ತು ೩೦ರ ವೇಳೆಗೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಮತ್ತೊಂದೆಡೆ ರಾಹುಲ್‌ಗಾಂಧಿ ತಾವು ಮತ್ತೆ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅದರೂ ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಮತ್ತೊಬ್ಬರಿಗೆ ಅಧ್ಯಕ್ಷ ಪಟ್ಟ ನೀಡಲು ಚಿಂತನೆ ನಡೆಸಲಾಗಿದೆ.೨೦೧೯ರ ಲೋಕಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿದ ನೈತಿಕ ಹೊಣೆ ಹೊತ್ತು ರಾಹುಲ್‌ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದೆ.
ಸೋನಿಯಾಗಾಂಧಿ ಅವರಿಗೆ ನಿಷ್ಠರಾಗಿರುವ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್‌ಗೆಲ್ಹೋಟ್ ಬಗ್ಗೆ ಹೈಕಮಾಂಡ್ ಒಲವು ಹೊಂದಿದೆ. ಆದರೆ, ಮುಖಂಡರ ಜತೆ ಸರಣಿ ಸಭೆಗಳನ್ನು ನಡೆಸಿದ ಬಳಿಕವಷ್ಟೇ ಒಮ್ಮತದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
ಅಶೋಕ್ ಗೆಲ್ಹೋಟ್ ಅವರು ದೇಶದ ರಾಜಕಾರಣದ ಉಸಾಬರಿ ನನಗೆ ಬೇಡ, ರಾಜ್ಯದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ನೀಡಿ ಬೆಳೆಸುವೆ ಎಂದಿದ್ದಾರೆ. ಆದರೆ, ಕೊನೇ ಕ್ಷಣದಲ್ಲಿ ನಿಲುವು ಬದಲಾಯಿಸುವ ಸಾಧ್ಯತೆ ಇದೆ.
ಗೋವಾದಲ್ಲಿ ಆಪರೇಷನ್ ಕಮಲದಿಂದಾಗಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷದಲ್ಲಿ ಹಿರಿಯ ನಾಯಕರ ಅಸಮಾಧಾನ, ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರಲ್ಲಿ ಹುರುಪು-ಉತ್ಸಾಹ ಮೂಡಿಸುವ ವ್ಯಕ್ತಿಯೊಬ್ಬರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಸವಾಲು ಹೈಕಮಾಂಡ್ ಮುಂದಿದೆ.