ಕೈ ಅಧಿಕಾರಕ್ಕೆ ಬರಲ್ಲ ಸಿಎಂ ಭವಿಷ್ಯ

ಬೆಂಗಳೂರು,ಏ.೪:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ, ಬಿಜೆಪಿ ಸಂಪೂರ್ಣ ಬಹುಮತ ಪಡೆದು ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ೩-೪ ದಿನಗಳ ಬೆಳವಣಿಗೆಗಳನ್ನು ಗಮನಿಸಿದರೆ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ ಎಂದರು.ಕೆಲವು ಕ್ಷೇತ್ರಗಳಲ್ಲಿ ಆಶ್ಚರ್ಯಕರ ಫಲಿತಾಂಶ ಬರಲಿದೆ ಎಂಬ ಭವಿಷ್ಯವನ್ನು ನುಡಿದ ಅವರು, ಏನೇ ಆಗಲಿ ಬಿಜೆಪಿಗೆ ಬಹುಮತ ಎಂದರು.
ಆಂತರಿಕ ವಿದ್ಯಮಾನಗಳ ಪ್ರತಿಬಿಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಖಾಸಗಿ ಚಾನಲ್‌ನ ಸಂದರ್ಶನವೊಂದರಲ್ಲಿ ಮತ್ತೆ ಸಿಎಂ ಆಗುವ ಬಯಕೆ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರೇನೋ ಬಯಸಿದ್ದಾರೆ. ಆದರೆ, ಜನರ ನಾಡಿಮಿಡಿತ ಏನಿದೆಯೋ ಯಾರಿಗೆ ಗೊತ್ತು. ಫಲಿತಾಂಶ ಬಂದ ಮೇಲೆ ಜನರ ಅಭಿಮತ ತಿಳಿಯಲಿದೆ ಎಂದರು.ಈ ಸಂದರ್ಶನದಲ್ಲಿ ಸಿದ್ದರಾಮಯ್ಯ ಹೊಸದೇನೂ ಹೇಳಿಲ್ಲ. ಜನರ ಒಲವು ಇದ್ದರೆ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂದು ಮಾರ್ಮಿಕವಾಗಿ ಹೇಳಿದರು.ಸಿದ್ದರಾಮಯ್ಯರವರ ಮಾತುಗಳು ಕಾಂಗ್ರೆಸ್ ಪಕ್ಷದ ಆಂತರಿಕ ವಿದ್ಯಮಾನಗಳ ಪ್ರತಿಬಿಂಬ, ಇಲ್ಲದಿರುವ ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ ನಾಯಕರು ಹೋರಾಟ ನಡೆಸಿದ್ದಾರೆ. ಅವರಿಗೆ ಜನಹಿತ ಮುಖ್ಯವಲ್ಲ ಎಂದರು.ಕಾಂಗ್ರೆಸ್‌ನಲ್ಲಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರು ಹೋದ ಕಡೆಯಲೆಲ್ಲ ನಾನೇ ಸಿಎಂ ನನಗೆ ಆರ್ಶೀವಾದ ಮಾಡಿ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಈ ಇಬ್ಬರು ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆ ಅದು ನನಸಾಗಲ್ಲ ಎಂದರು.
ಬಂಡಾಯ ಪರಿಣಾಮ ಬೀರಲ್ಲ
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್‌ರವರ ಬಂಡಾಯ, ಕೆಲ ಬಿಜೆಪಿ ಶಾಸಕರ ಪಕ್ಷ ನಿರ್ಗಮನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟಿಕೆಟ್ ಸಿಗದ ಕೆಲವರು ಪಕ್ಷ ಬಿಟ್ಟು ಹೋಗಿರಬಹುದು ಅಷ್ಟೇ, ಇದರಿಂದ ಪಕ್ಷದ ಮೇಲೆ ಯಾವ ಪರಿಣಾಮ ಬೀರಲ್ಲ. ಬಿಜೆಪಿಯಿಂದ ಮತ್ತೆ ಯಾರೂ ಹೋಗಲ್ಲ. ಡಿ.ಕೆ ಶಿವಕುಮಾರ್ ಸುಮ್ಮನೆ ಅವರು ಬರುತ್ತಾರೆ ಇವರು ಬರುತ್ತಾರೆ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದರು.