
ಹಾಸನ.ಫೆ.28- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 7 ನೇ ವೇತನ ಆಯೋಗದ ವರದಿ ಜಾರಿ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಶ್ವಾಸನೆ ನೀಡಿದ್ದಾರೆ.
7ನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ನಾಳೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಯಂತ್ರ ಸ್ಥಗಿತಗೊಳ್ಳಲಿದೆ ಎಂದು ಹಾಸನದ ಆಲೂರಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡುತ್ತಾ ತಿಳಿಸಿದರು.
ರಾಜ್ಯದ ಜನರ ಸಂಕಷ್ಟ, ನೋವು ಅರಿತು ಅವುಗಳಿಗೆ ಪರಿಹಾರ ಕಲ್ಪಿಸಲು ಮಾಡುತ್ತಿರುವ ಯಾತ್ರೆಯೇ ಪ್ರಜಾಧ್ವನಿ ಯಾತ್ರೆ. ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಯಾತ್ರೆ ಮಾಡುತ್ತಿದ್ದರೆ, ನಾನು ದಕ್ಷಿಣದ ಜಿಲ್ಲೆಗಳಲ್ಲಿ ಯಾತ್ರೆ ಮಾಡುತ್ತಿದ್ದೇನೆ ಎಂದರು.
ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈ ಭಾಗದಲ್ಲಿರುವ ಕಾಡಾನೆ ದಾಳಿ, ಎತ್ತಿನಹೊಳೆ ಪರಿಹಾರ ಮತ್ತಿತರ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ಈ ಭಾಗದಲ್ಲಿ ಕಾಡಾನೆ ದಾಳಿಗೆ 78 ಜನ ಮೃತಪಟ್ಟಿರುವುದಾಗಿ ಸುರೇಶ್ ಅವರು ತಿಳಿಸಿದ್ದಾರೆ. ಈ ಮೃತರ ಕುಟುಂಬಕ್ಕೆ ಸರಿಯಾದ ಪರಿಹಾರ ಸಿಕ್ಕಿಲ್ಲ. ರಾಜ್ಯಸಭೆ ಸಂಸದರಾದ ಜಿ.ಸಿ ಚಂದ್ರಶೇಖರ್ ಅವರು ರಾಜ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ನಿಮ್ಮ ರಕ್ಷಣೆ ಹಾಗೂ ಅರಣ್ಯ ಹದ್ದುಬಸ್ತಿಗೆ 650 ಕೋಟಿ ಮಂಜೂರು ಮಾಡಿಸಿದರೂ ಈವರೆಗೂ ಕೆಲಸ ಪ್ರಾರಂಭವಾಗಿಲ್ಲ ಎಂದು ಅವರು ದೂರಿದರು.
ಕಾಂಗ್ರೆಸ್ ಪಕ್ಷ ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಜನರಿಗೆ ಜಮೀನು ನೀಡುವ ಕಾನೂನು ತಂದಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅರಣ್ಯ ಪ್ರದೇಶದಲ್ಲಿ ಇರುವವರನ್ನು ಒಕ್ಕಲೆಬ್ಬಿಸದೇ ಅವರ ಉಳುಮೆಗೆ ಜಮೀನು ನೀಡಲಿದೆ. ಈ ಬಗ್ಗೆ ನಾವು ಕೇಂದ್ರಕ್ಕೆ ಪತ್ರ ಬರೆಯುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿದೆ. ಪರಿಣಾಮ ಎಲ್ಲ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಬಿಜೆಪಿಯವರು ನಿಮ್ಮ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ವಿದೇಶದಿಂದ ಕಪ್ಪು ಹಣ ತಂದು 15 ಲಕ್ಷ ನೀಡುತ್ತೇವೆ ಎಂದರು. 15 ಲಕ್ಷ ನಿಮ್ಮ ಖಾತೆಗೆ ಬಂತಾ? ಬರಲಿಲ್ಲ. ಅಚ್ಛೇ ದಿನ ನೀಡುತ್ತೇವೆ ಎಂದರು, ಅಚ್ಛೇದಿನ ಬಂತಾ? ಎಂದು ಪ್ರಶ್ನಿಸಿದರು.
ಪ್ರಧಾನಿ ನಿನ್ನೆ ಶಿವಮೊಗ್ಗಕ್ಕೆ ಬಂದು ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ. ಆದರೆ ಯಡಿಯೂರಪ್ಪ ಅವರ ಕಣ್ಣಲ್ಲಿ ನೀರು ಯಾಕೆ ಹಾಕಿಸಿದರು? ನಾನು ಅವರ ಆಂತರಿಕ ವಿಚಾರ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದರು.
ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದಾಗ ಬಿಜೆಪಿ 600 ಆಶ್ವಾಸನೆಗಳನ್ನು ನೀಡಿತ್ತು. ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ನಿಮ್ಮ ತಾಲೂಕಿನಲ್ಲಿ ಯಾರಿಗಾದರೂ ಉದ್ಯೋಗ ಸಿಕ್ಕಿತಾ? ಪಿಎಸ್ಐ ಹುದ್ದೆ ಸೇರಿದಂತೆ ರಾಜ್ಯದ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ಮಾಡಿದ್ದು, ಲಂಚ ನೀಡಿದವರಿಗೆ ಮಾತ್ರ ಉದ್ಯೋಗ ನೀಡುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.