ಕೈ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ವನಾಶ

ಮೋದಿ ವಾಗ್ದಾಳಿ
ಮುಲ್ಕಿ (ದಕ್ಷಿಣ ಕನ್ನಡ),ಮೇ.೩-ಭಯೋತ್ಪಾದಕರನ್ನು ರಕ್ಷಿಸುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರ್ವನಾಶವಾಗುವುದು ನಿಶ್ಚಿತ. ತುಷ್ಠಿಕರಣ ಕಾಂಗ್ರೆಸ್ ಪಕ್ಷದ ಏಕೈಕ ನೀತಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದಲ್ಲಿ ವರ್ಷಗಳ ಹಿಂದೆ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ವಿಧ್ವಂಸಕ ಕೃತ್ಯ ನಡೆಸಿದ ಅಪರಾಧಿಗಳನ್ನು ಆರೋಪ ಮುಕ್ತಗೊಳಿಸಲಾಗಿದೆ. ಕಾಂಗ್ರೆಸ್ ಶಾಂತಿಯ ವಿರೋಧಿ, ಅಭಿವೃದ್ಧಿಯ ವಿರೋಧಿ ಎಂದು ಅವರು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭಾ ಚುನಾವಣೆಗೆ ೧ ವಾರ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತದಾರರನ್ನು ಓಲೈಸಲು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಅಬ್ಬರದ ಮತಬೇಟೆ ಕೈಗೊಂಡಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಕಾರ್ನಾಡಿನ ಗುಂಡಾಲು ಪ್ರದೇಶದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ತುಳುವಿನಲ್ಲಿ ಭಾಷಣ ಮಾಡಿದ ಪ್ರಧಾನಿ ಅವರು ಪರಶುರಾಮ ಕ್ಷೇತ್ರದ ಮುಲ್ಕಿ ವೆಂಕಟರಮಣಸ್ವಾಮಿಗೆ ನಮಸ್ಕರಿಸಿದರು.
ಸಿದ್ದು ವಿರುದ್ಧ ವಾಗ್ದಾಳಿ
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಮತ ಏಕೆ ಕೇಳುತ್ತಿದೆ ಎಂದರೆ ಆ ಪಕ್ಷದ ನಾಯಕನೊಬ್ಬ ನಿವೃತ್ತಿ ಹೊಂದುತ್ತಿದ್ದಾರೆ. ಅವರ ಗೆಲುವಿಗಾಗಿ ನಾಯಕರು ಮತ ಕೇಳುತ್ತಿದ್ದಾರೆ. ಬಿಜೆಪಿಯ ಎಲ್ಲಾ ಯೋಜನೆಗಳನ್ನು ನಾಶ ಮಾಡಲು ಮತಯಾಚಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್ ವಿರುದ್ಧವೂ ಕಿಡಿಕಾರಿ ಜೆಡಿಎಸ್ ಕೂಡ ಕಚ್ಚೆ ಪಂಚೆಯ ಪಕ್ಷವಾಗಿದೆ ಎಂದು ಲೇವಡಿ ಮಾಡಿದರು
ಪ್ರತಿ ಯೋಜನೆಯಲ್ಲೂ ಶೇ.೮೫ ರಷ್ಟು ಕಮಿಷನ್ ಪಡೆಯುವ ಕಾಂಗ್ರೆಸ್ ಕರ್ನಾಟಕದ ಅಭಿವೃದ್ಧಿಯನ್ನು ದಶಕಗಳಷ್ಟು ಹಿಂದೆ ತೆಗೆದುಕೊಂಡು ಹೋಗಿದೆ. ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಟೀಕಿಸಿದರು.
ತಮ್ಮ ಭಾಷಣದಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾಧನೆಯನ್ನು ನೆರೆದಿದ್ದ ಜನಸ್ತೋಮದ ಮುಂದೆ ಬಿಚ್ಚಿಟ್ಟರು. ಮೀನುಗಾರರಿಗೆ ಸಾಕಷ್ಟು ಅನುಕೂಲವಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ರಾಜ್ಯದ ಯುವಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅಂತರಿಕ್ಷಾ ವಲಯದಲ್ಲೂ ರಾಜ್ಯದ ಯುವಕರು ದೇಶದ ಬಾವುಟ ವನ್ನು ಹಾರಿಸಿದ್ದಾರೆ. ಈ ಭಾಗದ ಯುವಕರು ರಾಕೆಟ್ ಮತ್ತು ಉಪಗ್ರಹ ತಯಾರಿಸಿದ್ದಾರೆ ಎಂದರು.
ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಳು ದೂರವಿಲ್ಲ ಇನ್ನು ಒಂದು ವಾರ ಮಾತ್ರ ಬಾಕಿ ಉಳಿದಿದೆ. ದೇಶದಲ್ಲಿ ಕರ್ನಾಟಕವನ್ನು ನಂ.೧ ಮಾಡುತ್ತೇವೆ. ಇದು ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯ. ರಾಜ್ಯಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಸೂಪರ್ ಪವರ್ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಪಿಎಂ ಕಿಸಾನ್ ಯೋಜನೆಯಿಂದ ಮಹಿಳಾ ರೈತರಿಗೆ ಅನುಕೂವಾಗಿದೆ. ಮುದ್ರಾ ಯೋಜನೆಯ ಲಾಭ ಮಹಿಳೆಯರು ಪಡೆದು ಇಂದು ಲಕ್ಷಾಧೀಪತಿಗಳಾಗಿದ್ದಾರೆ. ಜಿ-೨೦ ಶೃಂಗಸಭೆಯಲ್ಲಿ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರಾಣಿ ಅಬ್ಬಕ್ಕ ಮಾದರಿಯ ಸಾಮರ್ಥ್ಯ ನಮ್ಮ ಮಹಿಳೆಯರಲ್ಲೂ ಇದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರಿಗೆ ಶೌಚಾಲಯಗಳಿರಲಿಲ್ಲ, ಓದಲು ಶಾಲೆಗಳಿರಲಿಲ್ಲ, ಗ್ಯಾಸ್ ಕೊರತೆ ಉಂಟಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮೋದಿ ಹೇಳಿದರು.
ವಿಶ್ವದಲ್ಲೇ ಭಾರತದ ಕೀರ್ತಿ ಹೆಚ್ಚಾಗುತ್ತಿದೆ. ಅದೇ ರೀತಿ ದೇಶದಲ್ಲಿ ರಾಜ್ಯದ ಕೀರ್ತಿ ಹೆಚ್ಚಾಗ ಬೇಕಾದರೆ ಬಿಜೆಪಿಗೆ ಮತ ಹಾಕಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಮೋದಿ ಹೇಳಿದರು.
ಈ ಬೃಹತ್ ಸಮಾವೇಶದಲ್ಲಿ ೧೩ ಬಿಜೆಪಿ ಅಭ್ಯರ್ಥಿಗಳು ಸೇರಿದಂತೆ ಇತರ ನಾಯಕರು ಉಪಸ್ಥಿತರಿದ್ದರು. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡರು.