ಕೈವಾರ ತಾತಯ್ಯನವರ 188ನೇ ಆರಾಧನಾ ಮಹೋತ್ಸವ

ಕೋಲಾರ,ಮೇ,೨೩-ಕೈವಾರ ತಾತಯ್ಯನವರ ತತ್ವಬೋಧನೆಗಳು ಸಾಗರದಷ್ಟು ಆಳ, ಭೂಮಂಡಲದಷ್ಟು ವ್ಯಾಪಕ ಹಾಗೂ ಆಕಾಶದಷ್ಟು ಎತ್ತರದಷ್ಟು ಅರ್ಥವುಳ್ಳದ್ದಾಗಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.
ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ತಾತಯ್ಯನವರ ೧೮೮ ನೇ ಜೀವ ಸಮಾಧಿ ಪ್ರವೇಶದ ಆರಾಧನಾ ಮಹೋತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಗುರುಸಂದೇಶವನ್ನು ನೀಡುತ್ತಾ ಮಾತನಾಡಿದರು.
ಮಾನವರ ಬದುಕಿನಲ್ಲಿ ಮಾಯೆ ಬಹು ಮಹತ್ವದ ಪಾತ್ರ ವಹಿಸುತ್ತದೆ. ಮಾಯೆಯ ಪೊರೆ ಕಳಚಿದರೆ ಮಾತ್ರ ನಿಜ ಬದುಕಿನ ಮರ್ಮ ತಿಳಿಯುತ್ತದೆ. ಮಾನವರು ದೇಹವೇ ನಿತ್ಯವೆಂಬಂತೆ ಭಾವಿಸಿ ವರ್ತಿಸುತ್ತಿದ್ದಾರೆ. ಆದುದರಿಂದಲೇ ದೇಹ ನೋಡಬಲ್ಲರೇ ಹೊರತು ದೇಹದ ಒಳಗಿರುವ ತಾರಕಜ್ಯೋತಿಯನ್ನು ಕಾಣಲು ಸಾಧ್ಯವಿಲ್ಲ. ಕೈವಾರ ತಾತಯ್ಯನವರ ಬೋಧನೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಾ ಬದುಕಿನಲ್ಲಿ ಅಳವಡಿಸಿಕೊಂಡರೆ ಕರ್ಮಾನುಸಾರವಾಗಿ ಫಲವನ್ನು ಅನುಭವಿಸಬಹುದು. ಮನಸ್ಸು ಇಂದ್ರಿಯಗಳ ಹಿಂದೆ ಹೋಗದಿದ್ದರೆ ಇಂದ್ರಿಯಗಳನ್ನು ಜಯಿಸುವುದು ಸಾಧ್ಯ. ಆದುದರಿಂದ ಮನಸ್ಸನ್ನು ಇಂದ್ರಿಯಗಳ ಸಂಬಂಧವಿಲ್ಲದಂತೆ ಕಡಿದುಕೊಂಡವನು ಮಹಾತ್ಮನಾಗುತ್ತಾರೆ ಎಂದರು.
ಅತಿಥಿಗಳಾಗ ಆಗಮಿಸಿದ್ದ ಹಿರಿಯ ವಿದ್ವಾಂಸರಾದ ಡಾ||ಜೋಸ್ಯುಲ ಸದಾನಂದಶಾಸ್ತ್ರಿರವರು ಮಾತನಾಡುತ್ತಾ ಮಾನವರಾಗಿ ಹುಟ್ಟಿದ ಮೇಲೆ ಭಗವಂತ ಪೋಷಿಸಿಯೇ ಪೋಷಿಸುತ್ತಾನೆ. ಅದಕ್ಕಾಗಿ ವ್ಯಥೆ ಪಡುವುದು ಹುಚ್ಚುತನವಾಗುತ್ತದೆ. ಪೂರ್ವಜನ್ಮಗಳಲ್ಲಿ ಮಾಡಿರುವ ಕರ್ಮಗಳು ಹಿಂಬಾಲಿಸಿಕೊಂಡು ಬಂದೇ ಬರುತ್ತದೆ. ಪೂರ್ವಕರ್ಮಗಳು ಪೀಡಿಸದೆ ಇರಬೇಕಾದರೆ ಭಗವಂತನ ಸ್ಮರಣೆಯನ್ನು ನಿರಂತರವಾಗಿ ಮಾಡುತ್ತಿರಬೇಕೆಂದರು.
ಆರಾಧನಾ ಮಹೋತ್ಸವದ ಅಂಗವಾಗಿ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಸದ್ಗುರು ಯೋಗಿ ನಾರೇಯಣ ತಾತಯ್ಯನವರಿಗೆ ಅಭಿಷೇಕ , ಅಷ್ಟಾವಧಾನ ಸೇವೆ, ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಸಾಮೂಹಿಕ ನಾಮ ಸಂಕೀರ್ತನೆಯನ್ನು ನೆರವೇರಿಸಲಾಯಿತು. ನಂತರ ದೇವಾಲಯದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ತಾತಯ್ಯನವರನ್ನು ಸಭಾಂಗಣಕ್ಕೆ ಭಜನೆಯ ಮೂಲಕ ಕರೆತರಲಾಯಿತು. ಸದ್ಗುರುಗಳಿಗೆ ಶೋಡಶೋಪಚಾರ ಪೂಜಾ ಕೈಂಕರ್ಯವನ್ನು ನೆರವೇರಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಸದ್ಗುರು ತಾತಯ್ಯನವರ ೧೮೮ ನೇ ಜೀವ ಸಮಾಧಿ ಮಹೋತ್ಸವದ ಅಂಗವಾಗಿ ೨೦೨೨ -೨೦೨೩ ನೇ ಸಾಲಿನ ಮಠದ ಅಭಿವೃದ್ದಿ ಮತ್ತು ವಾರ್ಷಿಕ ಕಾರ್ಯಕ್ರಮಗಳ ವರದಿಯನ್ನು ತಾತಯ್ಯನವರಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಸಾಧು ಸತ್ಪುರುಷರಿಗೆ ಕಾಷಯ ವಸ್ತ್ರವನ್ನು ವಿತರಿಸಲಾಯಿತು.