ಕೈವಾರದಲ್ಲಿ ಸಂಕ್ರಾಂತಿ ಉತ್ಸವ -ಗೋಪೂಜೆ

ಕೋಲಾರ,ಜ,೧೭- ಪುರಾಣ ಪ್ರಸಿದ್ದ ಯಾತ್ರಾಸ್ಥಳವಾದ ಕೈವಾರದಲ್ಲಿ ಸಂಕ್ರಾಂತಿಯ ಪ್ರಯುಕ್ತ ಅಮರನಾರೇಯಣಸ್ವಾಮಿ, ಭೀಮಲಿಂಗೇಶ್ವರ ಸ್ವಾಮಿ ಮತ್ತು ಶ್ರೀ ಯೋಗಿ ನಾರೇಯಣಮಠದ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸಂಕ್ರಾಂತಿಯ ಸಂದರ್ಭದಲ್ಲಿ ವಿಶೇಷವಾಗಿ ಯೋಗಿ ನಾರೇಯಣ ತಾತಯ್ಯನವರಿಗೆ ಮಾಲೆ ಯನ್ನು ಹಾಕುವ ಸಂಪ್ರದಾಯ ಮೊದಲಿನಿಂದಲೂ ರೂಢಿಯಲ್ಲಿದೆ. ಇದರಂತೆ ಈ ಬಾರಿಯೂ ಮಾಲಾಧಾರಿಗಳು ಮಠಕ್ಕೆ ಬಂದು ತಾತಯ್ಯನವರ ಸೇವೆಯಲ್ಲಿ ಪಾಲ್ಗೊಂಡಿದ್ದರು. ಆನೇಕಲ್‌ನ ಚಿಕ್ಕತಿಮ್ಮಸಂದ್ರದಿಂದ ಭಕ್ತರು ಮಾಲೆ ಧರಿಸಿ ಕೈವಾರಕ್ಕೆ ಆಗಮಿಸಿದ್ದರು. ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರ ನೇತೃತ್ವದಲ್ಲಿ ಪ್ರಾತ:ಕಾಲ ಸಾಮೂಹಿಕ ನಾಮಸಂಕೀರ್ತನೆಯನ್ನು ಸಮರ್ಪಿಸಲಾಯಿತು.
ಸಂಕ್ರಾಂತಿಯ ಹಬ್ಬದಂದು ಕಾಲಜ್ಞಾನಿ ಸದ್ಗುರು ಯೋಗಿನಾರೇಯಣ ಯತೀಂದ್ರರ ದೇವಾಲಯದ ಪ್ರಾಕಾರೋತ್ಸವದಲ್ಲಿ ಭಕ್ತರು ಭಾಗವಹಿಸಿದ್ದರು. ತಾತಯ್ಯನವರ ಉತ್ಸವ ವಿಗ್ರಹವನ್ನು ಪಲ್ಲಕ್ಕಿಯಲ್ಲಿರಿಸಿ ಉತ್ಸವವನ್ನು ನಡೆಸಲಾಯಿತು. ಭಕ್ತರು ತಾತಯ್ಯನವರ ದರ್ಶನವನ್ನು ಪಡೆದು ಪುನೀತರಾದರು. ತಾತಯ್ಯನವರ ದೇವಾಲಯದ ಆವರಣದಲ್ಲಿ ಸಂಕೀರ್ತನೆ ಭಜನೆಯನ್ನು ಮಾಲಾಧಾರಿಗಳು ಮಾಡಿದರು. ತಾತಯ್ಯನವರು ಜೀವ ಸಮಾಧಿಸ್ಥರಾಗಿರುವ ಮೂಲ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ನಾದಸುಧಾರಸ ವೇದಿಕೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅಕ್ಕಿ ದಾನ: ಶ್ರೀ ಯೋಗಿ ನಾರೇಯಣ ಮಠದಲ್ಲಿ ಪ್ರತಿನಿತ್ಯ ನಡೆಯುವ ಉಚಿತ ಅನ್ನದಾನ ದಾಸೋಹಕ್ಕಾಗಿ ಸಂಕ್ರಾಂತಿಯಂದು ಮಾಲಾಧಾರಿಗಳಾಗಿ ಬಂದಿದ್ದ ಆನೇಕಲ್ ಚಿಕ್ಕತಿಮ್ಮಸಂದ್ರ ಗ್ರಾಮದ ಭಕ್ತಾದಿಗಳು ೨೫ ಕ್ವಿಂಟಾಲ್ ಅಕ್ಕಿಯನ್ನು ದಾನವಾಗಿ ನೀಡಿದರು.