ಕೈವಾರದಲ್ಲಿ ತಾತಯ್ಯನವರ ೧೮೯ನೇ ಆರಾಧನಾ ಮಹೋತ್ಸವ

ಕೋಲಾರ,ಜೂ,೧೦-ಭಕ್ತಿಯಿಂದ ಪ್ರಾರಂಭವಾಗುವ ಯೋಗದ ಪಯಣ ಕೊನೆಯಲ್ಲಿ ಪರಮಾತ್ಮನಲ್ಲಿ ಐಕ್ಯವಾಗುವುದೇ ಜೀವಸಮಾಧಿ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.
ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ತಾತಯ್ಯನವರ ೧೮೯ ನೇ ಜೀವ ಸಮಾಧಿ ಪ್ರವೇಶ ಪರ್ವ ಆರಾಧನಾ ಮಹೋತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಗುರುಸಂದೇಶವನ್ನು ನೀಡುತ್ತಾ ಮಾತನಾಡಿದರು.


ದೇಹದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡ ಅಜ್ಞಾನಿಗಳನ್ನು ಮಾತ್ರ ಕರ್ಮಫಲಗಳು ಕಟ್ಟಿಹಾಕುವ ಮೂಲಕ ಮತ್ತೆ ಮತ್ತೆ ಹುಟ್ಟು-ಸಾವುಗಳ ಚಕ್ರದಲ್ಲಿ ಸಿಕ್ಕಿಬೀಳಬೇಕಾಗುತ್ತದೆ. ಆದರೆ ಯೋಗೀಶ್ವರನು ಮಾತ್ರ ದೇಹವು ನಾನಲ್ಲ, ಇಂದ್ರಿಯಗಳು ನಾನಲ್ಲ, ಶುದ್ಧ ಚೇತನಸ್ವರೂಪವಾದ ಪರಬ್ರಹ್ಮವೇ ನಾನು ಎಂದು ಅರಿತುಕೊಳ್ಳುತ್ತಾನೆ. ಇಂತಹ ಯೋಗಿಯು ದೇಹ ತ್ಯಾಗದ ಬಳಿಕ ಪರಬ್ರಹ್ಮತತ್ವದಲ್ಲಿ ಐಕ್ಯವಾಗುತ್ತಾನೆ ಎಂದರು.
ನಾನು ಮತ್ತೆ ಈ ಭೂಮಂಡಲದಲ್ಲಿ ಹುಟ್ಟುವುದಿಲ್ಲ. ಸದ್ಗುರುವಾದ ಪರಮಾತ್ಮನಲ್ಲಿ ಐಕ್ಯವಾಗಿದ್ದೇನೆ. ನನ್ನಲ್ಲಿ ಯಾವುದೇ ಆಸೆಗಳಿಲ್ಲ. ಆಸೆಗಳೆಲ್ಲ ಇಂಗಿಹೋದ ನಮಗೆ ಇದೇ ಕಡೇ ಜನ್ಮ ಎಂದಿದ್ದಾರೆ ಯೋಗಿಸ್ವರೂಪರಾದ ಕೈವಾರದ ತಾತಯ್ಯನವರು. ತಾತಯ್ಯನವರು ಹೀಗೆ ಹೇಳಬೇಕಾದರೆ ಕಾರಣವಿದೆ. ಆಸೆಗಳ ಮಾಯಾ ಬಂಧನವೇ ಮಾನವರ ಭ್ರಾಂತಿಗಳಿಗೆ ಮೂಲ. ಮಾಯೆಯ ಕಾರ್ಯವು ಬಯಕೆಗಳಿಂದ ಆರಂಭವಾಗುತ್ತದೆ ಎಂದು ಹೇಳಿದರು
ಒಂದು ಕೊರತೆಯ ಬಯಕೆಯನ್ನು ಪೂರೈಸುತ್ತಿದ್ದಂತೆಯೇ ಮತ್ತೊಂದು ಬಯಕೆ ಹುಟ್ಟಿಕೊಳ್ಳುತ್ತದೆ. ಕೊರತೆಗಳಿಗೆ ಕೊನೆಯಿಲ್ಲ. ಒಂದಾದ ಮೇಲೊಂದರಂತೆ ಆಸೆಗಳು ಬರುತ್ತಿರುತ್ತದೆ. ಅವುಗಳನ್ನು ಪೂರೈಸಬೇಕೆಂಬ ಬಯಕೆಯು ಮನಸ್ಸಿನಲ್ಲಿ ಜಾಗೃತವಾಗುತ್ತಿರುತ್ತದೆ. ಇವುಗಳನ್ನು ಪೂರೈಸುವುದರಲ್ಲೇ ಜೀವನದ ಅಂತ್ಯ ಕಾಣಬೇಕಾಗುತ್ತದೆ. ಆಸೆಗಳನ್ನು ಪೂರೈಸಿಕೊಳ್ಳುವುದರಲ್ಲಿಯೇ ತೃಪ್ತನಾಗುತ್ತಾ, ಬದುಕಿನ ಗುರಿಯಾದ ಮೋಕ್ಷ ಸಂಪಾದನೆಯ ಕಡೆಗೆ ಗಮನ ಹೋಗುವುದಿಲ್ಲ ಎಂದು ತಿಳಿಸಿದರು.
ಕೊರತೆಗಳು-ಬಯಕೆಗಳು ಮಾನವನ ಮನಸ್ಸಿನಲ್ಲಿ ಉತ್ಪತ್ತಿಯಾಗುತ್ತದೆ. ಮನಸ್ಸು ಮಾಯೆಗೆ ಕಟ್ಟುಬಿದ್ದು ಅಜ್ಞಾನಿಯಾಗುತ್ತದೆ. ಮಾನವನ ಮನಸ್ಸು ಆಸೆಯೆಂಬ ಹಗ್ಗದಿಂದ ಬಂಧಿತವಾಗಿದೆ. ತೃಪ್ತವಾದ ಮನಸ್ಸನ್ನು ಹೊಂದುವುದು ಸಾಧ್ಯವಾಗುವುದಿಲ್ಲ. ಇದು ಸಾಮಾನ್ಯರ ಸ್ಥಿತಿ. ಆದರೆ ಯೋಗೀಶ್ವರನು ಮಾಯೆಯಿಂದ ಬರುವ ಆಸೆಗಳನ್ನೆಲ್ಲವನ್ನೂ ಮನಸ್ಸೆಂಬ ಕತ್ತಿಯಿಂದ ಕಡಿದುಹಾಕಿ ನಿರ್ಲಿಪ್ತನಾಗಿರುತ್ತಾನೆ. ಯೋಗಿಯಲ್ಲಿ ಯಾವುದೇ ಆಸೆಗಳಿರುವುದಿಲ್ಲ. ಈ ಕಾರಣದಿಂದ ಇದೇ ನನ್ನ ಕಟ್ಟಕಡೆಯ ಜನ್ಮ, ಯೋಗಸಾಧನೆಯ ಮೂಲಕ ಸದ್ಗುರುವಿನಲ್ಲಿ ಐಕ್ಯವಾಗಿದ್ದೇನೆ ಎನ್ನುತ್ತಿದ್ದಾರೆ ತಾತಯ್ಯನವರು ಎಂದರು.
ಆರಾಧನಾ ಮಹೋತ್ಸವದ ಅಂಗವಾಗಿ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಸದ್ಗುರು ಯೋಗಿ ನಾರೇಯಣ ತಾತಯ್ಯನವರಿಗೆ ವಿಶೇಷ ಅಭಿಷೇಕ , ಅಷ್ಟಾವಧಾನ ಸೇವೆ, ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಸಾಮೂಹಿಕ ನಾಮ ಸಂಕೀರ್ತನೆಯನ್ನು ನೆರವೇರಿಸಲಾಯಿತು.
ನಂತರ ದೇವಾಲಯದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ತಾತಯ್ಯನವರನ್ನು ಸಭಾಂಗಣಕ್ಕೆ ಭಜನೆಯ ಮೂಲಕ ಕರೆತರಲಾಯಿತು. ಸದ್ಗುರುಗಳಿಗೆ ಶೋಡಶೋಪಚಾರ ಪೂಜಾ ಕೈಂಕರ್ಯವನ್ನು ನೆರವೇರಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ತಾಳೆಗರಿಗಳಿಗೆ ಪೂಜೆ : ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು ರಚಿಸಿರುವ ತಾಳೆಗರಿಗಳನ್ನು ಉತ್ಸವದಲ್ಲಿ ಸಭಾಂಗಣದ ವೇದಿಕೆಗೆ ತಂದು ಪೀಠದಲ್ಲಿ ಇರಿಸಲಾಯಿತು. ತಾತಯ್ಯನವರು ನೀಡಿರುವ ಜ್ಞಾನ ಸಂಪತ್ತಾದ ತಾಳೆಗರಿಗಳನ್ನು ಪೂಜಿಸಲಾಯಿತು.
ಸದ್ಗುರು ತಾತಯ್ಯನವರ ೧೮೯ ನೇ ಜೀವ ಸಮಾಧಿ ಮಹೋತ್ಸವದ ಅಂಗವಾಗಿ ೨೦೨೩-೨೦೨೪ ನೇ ಸಾಲಿನ ಮಠದ ಅಭಿವೃದ್ದಿ ಮತ್ತು ವಾರ್ಷಿಕ ಕಾರ್ಯಕ್ರಮಗಳ ವರದಿಯನ್ನು ತಾತಯ್ಯನವರಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಸಾಧು ಸತ್ಪುರುಷರಿಗೆ ಕಾಷಾಯ ವಸ್ತ್ರವನ್ನು ವಿತರಿಸಲಾಯಿತು. ಇಡೀ ರಾತ್ರಿ ಆಖಂಡ ಸಂಕೀರ್ತನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಆರಾಧನಾ ಮಹೋತ್ಸವಕ್ಕೆ ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ತಂಡೋಪತಂಡವಾಗಿ ಭಾಗವಹಿಸಿದ್ದರು.
ನಾದಸುಧಾರಸ ವೇದಿಕೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಯೋಗಿನಾರೇಯಣ ಮಠದ ಟ್ರಸ್ಟ್ ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ ಸತ್ಯನಾರಾಯಣ್, ಸದಸ್ಯರುಗಳಾದ ಬಾಲಕೃಷ್ಣ ಭಾಗವತರ್, ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ವಿ.ಸುರೇಶ್, ಕೆ.ಎಂ. ತ್ಯಾಗರಾಜ್ ಮುಂತಾದವರು ಭಾಗವಹಿಸಿದ್ದರು.