ಕೈವಾರದಲ್ಲಿ ತಾತಯ್ಯನವರ ಜಯಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು

ಕೋಲಾರ,ಮಾ,೬- ಪುರಾಣ ಪ್ರಸಿದ್ಧವಾಗಿರುವ ಶ್ರೀಕ್ಷೇತ್ರ ಕೈವಾರದಲ್ಲಿ ಫಾಲ್ಗುಣ ಮಾಸದ ಹುಣ್ಣಿಮೆಯಂದು ಶ್ರೀಯೋಗಿನಾರೇಯಣ ತಾತಯ್ಯನವರು ಜನಿಸಿದ್ದಾರೆ. ಅಂದು ಶ್ರೀಅಮರನಾರೇಯಣಸ್ವಾಮಿಯ ರಥೋತ್ಸವ. ದಿನಾಂಕ ೭.೩.೨೦೨೩ ರಿಂದ ೯.೩.೨೦೨೩ ರವರೆಗೆ ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಶ್ರೀಕ್ಷೇತ್ರ ಕೈವಾರದಲ್ಲಿ ಆಯೋಜಿಸಲಾಗಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ರವರು ತಿಳಿಸಿದರು.
ಮಾ,೭ ರಂದು ಮಂಗಳವಾರ ಬೆಳಿಗ್ಗೆ ೮ ಗಂಟೆಗೆ ಶ್ರೀದೇವಿ ಭೂದೇವಿ ಸಮೇತ ಶ್ರೀಯೋಗಿನಾರೇಯಣ ತಾತಯ್ಯನವರಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿಯನ್ನು ಹಮ್ಮಿಕೊಳ್ಳಲಾಗಿದೆ. ನಂತರ ಅಲಂಕೃತ ಪಲ್ಲಕ್ಕಿಯಲ್ಲಿ ತಾತಯ್ಯನವರನ್ನು ಅಮರನಾರೇಯಣಸ್ವಾಮಿ ದೇವಾಲಯಕ್ಕೆ ಸಂಕೀರ್ತನೆಯೊಂದಿಗೆ ಕರೆತರಲಾಗುವುದು. ಶ್ರೀಕೃಷ್ಣಗಂಧೋತ್ಸವ ಸೇವೆಯನ್ನು ಸಮರ್ಪಿಸಲಾಗುವುದು. ಮಧ್ಯಾಹ್ನ ೧ ಗಂಟೆಗೆ ಶ್ರೀಅಮರನಾರೇಯಣಸ್ವಾಮಿ ಬ್ರಹ್ಮ ರಥೋತ್ಸವವನ್ನು ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಗುವುದು ಎಂದರು.
ಮಾ ೮ರ ಬುಧವಾರ ಶ್ರೀಯೋಗಿನಾರೇಯಣ ತಾತಯ್ಯನವರ ರಥೋತ್ಸವದ ಅಂಗವಾಗಿ ಬೆಳಿಗ್ಗೆ ೧೦ ಗಂಟೆಗೆ ತಾತಯ್ಯನವರಿಗೆ ವಿಶೇಷ ಅಭಿಷೇಕ, ನಾಮ ಸಂಕೀರ್ತನೆ, ಅಷ್ಟಾವಧಾನ ಸೇವೆ ಮಹಾಮಂಗಳಾರತಿಯನ್ನು ನೆರವೇರಿಸಿ ಮಧ್ಯಾಹ್ನ ೧.೩೦ ಗಂಟೆಗೆ ರಥೋತ್ಸವವನ್ನು ನೆರವೇರಿಸಲಾಗುವುದು ಎಂದರು.
ಮಾ ೯. ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಶ್ರೀಮತಿ ಅಂಬಿಕಾ ಅನಂತ್ ರವರು ಇಂಗ್ಲೀಷ್‌ಗೆ ಭಾಷಾಂತರಗೊಳಿಸಿರುವ “ಕೈವಾರ ತಾತಯ್ಯನವರ ಜೀವನ ಚರಿತ್ರೆ ಹಾಗೂ ಡಾ||ಜ್ಯೋಸ್ಯುಲ ಸದಾನಂದಶಾಸ್ತ್ರೀ ರವರು ವ್ಯಾಖ್ಯಾನಿಸಿರುವ ” ಶ್ರೀರಾಮ ಭವತಾರಕಮಂತ್ರ ಯೋಗಸಾರ” ಎಂಬ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು ಎಂದರು.
ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಮಾತನಾಡಿ ೯.೩.೨೦೨೩ ಗುರುವಾರದಂದು ಬೆಳಿಗ್ಗೆ ಕೈವಾರದ ತಿಪ್ಪರಾಜು ತಂಡದವರಿಂದ ನಾದಸ್ವರ, ನಂತರ ನಾದಸುಧಾರಸ ವೇದಿಕೆಯಲ್ಲಿ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರಿಂದ “ಆತ್ಮಬೋಧಾಮೃತ” ಪ್ರವಚನ, ಡಾ||ಜೋಸ್ಯುಲ ಸದಾನಂದಶಾಸ್ತ್ರೀ ರವರಿಂದ ಉಪನ್ಯಾಸ, ವಿಶಾಖಪಟ್ನಂ ಚೈತನ್ಯ ಸಹೋದರರಿಂದ ಗಾಯನ , ಬೆಂಗಳೂರಿನ ಅಧಿತಿ ಪ್ರಹ್ಲಾದ್ ರವರಿಂದ ಗಾಯನ , ಮಹಾಲಿಂಗಯ್ಯ ಮಠದ್ ರವರಿಂದ ಹಿಂದೂಸ್ಥಾನಿ ಗಾಯನ , ಹಾಗೂ ಹರಿಕಥೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಮೂರು ದಿನಗಳಕಾಲ ಪ್ರಾತ:ಕಾಲದಲ್ಲಿ ಘಂಟಾನಾದ, ಸುಪ್ರಭಾತ, ಗೋಪೂಜೆಯನ್ನು ನೆರವೇರಿಸಲಾಗುತ್ತದೆ ಎಂದು ತಿಳಿಸಿದರು. ಕೈವಾರ ಮಠದ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಮಠದ ಆಡಳಿತಾಧಿಕಾರಿ ಕೆ.ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.