ಕೈಯಲ್ಲಿ ಮೇಣದ ಬತ್ತಿ ಹಿಡಿದು ವಿಶಿಷ್ಟ ರೀತಿಯಲ್ಲಿ ಮತದಾನ ಜಾಗೃತಿ ಜಾಥಾ

ಅಥಣಿ :ಮಾ.29: ಮತದಾನದಿಂದ ಯಾರು ದೂರ ಉಳಿಯಬಾರದು. ಮತದಾನ ನಮ್ಮೆಲ್ಲರ ಹಕ್ಕು, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ತಾ.ಪಂ. ಇಒ ಶಿವಾನಂದ ಕಲ್ಲಾಪುರ ಹೇಳಿದರು.
ಅವರು ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ. ತಾಲೂಕಾ ಆಡಳಿತ. ತಾಲೂಕಾ ಪಂಚಾಯತ. ತಾಲೂಕಾ ಸ್ವೀಪ್ ಸಮಿತಿ ಅಥಣಿ ಹಾಗೂ ಪುರಸಭೆ ಕಾರ್ಯಾಲಯ ಅಥಣಿ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 07 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆ- 2024 ರ ಪ್ರಯುಕ್ತ ಮತದಾನ ಜಾಗೃತಿ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.ಈ ಬಾರಿ ಶೇಕಡಾವಾರು ಮತದಾನದ ಪ್ರಮಾಣ ಹೆಚ್ಚಿಸಲು ಮತದಾರರಲ್ಲಿ ಜಾಗೃತಿ ಮೂಡಿಸಲು ಜಾಥಾ ನಡೆಸಲಾಗುತ್ತಿದೆ
ಪ್ರಜಾಪ್ರಭುತ್ವವನ್ನು ಬಲಗೊಳಿಸುವ ಶಕ್ತಿ ಮತದಾರರಿಗಿದೆ. ಎಲ್ಲ ಮತದಾರರು ನಮ್ಮ ಸಂವಿಧಾನ ಕೊಟ್ಟಿರುವ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವ ಮೂಲಕ ಸುಭದ್ರವಾದ ದೇಶ ಕಟ್ಟಲು ಸಹಕರಿಸಿ ಎಂದು ಮನವಿ ಮಾಡಿದರು.
ಕೈಯಲ್ಲಿ ಮೇಣದ ಬತ್ತಿ ಹಿಡಿದು ವಿಶಿಷ್ಟ ರೀತಿಯಲ್ಲಿ ಹಮ್ಮಿಕೊಂಡಿದ್ದ ಜಾಥಾವು ಪುರಸಭೆಯಿಂದ ಪ್ರಾರಂಭವಾಗಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದರು ಜಾಥಾದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು. ಸಿಬ್ಬಂದಿ ವರ್ಗದವರು. ಅಂಗನವಾಡಿ ಕಾರ್ಯಕರ್ತೆಯರು. ಪೌರ ಕಾರ್ಮಿಕರೆಲ್ಲರೂ ಸೇರಿ ಕಡ್ಡಾಯ ಮತದಾನ ಭಿತ್ತಿ ಪತ್ರ ಪ್ರದರ್ಶಿಸಿದರು.
ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ತಾ.ಪಂ. ಇಒ ಶಿವಾನಂದ ಕಲ್ಲಾಪುರ ಅವರು ಮತದಾನ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಎಲ್ಲರೂ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ಈ ವೇಳೆ ಗ್ರೇಡ್ 2 ತಹಶೀಲ್ದಾರ ಬಿ ವಾಯ್ ಹೊಸಕೇರಿ. ಜಿಪಂ ಅಭಿಯಂತರ ವೀರಣ್ಣ ವಾಲಿ. ಪುರಸಭೆ ಮುಖ್ಯಾಧಿಕಾರಿ ನಾಗಣ್ಣ ಪರೀಟ್. ತಾಲೂಕಾ ಆರೋಗ್ಯಾಧಿಕಾರಿ ಡಾ. ಬಸಗೌಡಾ ಕಾಗೆ. ಸಿಡಿಪಿಓ ರೇಣುಕಾ ಹೊಸಮನಿ. ಪಶು ವೈದ್ಯಾಧಿಕಾರಿ ಡಿ ಜೆ ಕಾಂಬಳೆ. ಪುರಸಭೆಯ ಬಸವರಾಜ ಕಾಂಬಳೆ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು,