ಕೈನಿಂದ ಶೇ. ೧೦೦ ರಷ್ಟು ವಸೂಲಿ ದಂಧೆ: ಬಿವೈ ಕಿಡಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೯:ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ಸಿಗರು ಶೇ. ೧೦೦ ರಷ್ಟು ವಸೂಲಿ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕಾಲು ವರ್ಷವೂ ಕಳೆದಿಲ್ಲ. ಈಗಾಗಲೇ ಗುತ್ತಿಗೆದಾರರ ಕಮಿಷನ್,ವರ್ಗಾವಣೆ ದಂಧೆ ಹೊಲಸು ಮೈಗೆಲ್ಲ ಮೆತ್ತಿಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ. ೪೦ ರಷ್ಟು ಕಮಿಷನ್ ಆರೋಪ ಹೊರಿಸಿದ್ದ ಕಾಂಗ್ರೆಸ್ಸಿಗರು ಇದೀಗ ಶೇ. ೧೦೦ ರಷ್ಟು ವಸೂಲಿ ದಂಧೆಯಲ್ಲೇ ಮುಳುಗಿ ಹೋಗಿದ್ದಾರೆ ಎಂದು ಟ್ವೀಟ್‌ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಇದೇ ವೇಳೆ ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ ಕಲುಷಿತ ನೀರು ಸೇವಿಸಿ ನಾಗರಿಕರು ಸಾವನ್ನಪ್ಪಿದರೆ ನಮ್ಮನ್ನು ಕೇಳಬೇಡಿ, ಆತ್ಮಹತ್ಯೆಯಿಂದ ರೈತನು ಸತ್ತರೆ ಚಿಂತಿಸಬೇಡಿ, ಭ್ರಷ್ಟಾಚಾರ ಮಾಡಿ ಕಮಿಷನ್ ಪಡೆಯಲು ನಾವು ರೆಡಿ, ಇದು ಎಟಿಎಂ ಸರ್ಕಾರದ ನಿತ್ಯ ಗೀತೆ ಎಂದು ವ್ಯಂಗ್ಯವಾಡಿದೆ.