ಮತದಾರರ ಮಾಹಿತಿ ಸಂಗ್ರಹಿಸಿದ ಕೈ

ಬೆಂಗಳೂರು,ನ.೨೫- ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮಗಳು ಬಯಲಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ನಾಯಕರು ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯಿಂದ ಯಾರೆಲ್ಲ ಹೆಸರನ್ನು ತೆಗೆಯಲಾಗಿದೆ ಎಂಬ ಬಗ್ಗೆ ೧೦ ದಿನಗಳ ಒಳಗೆ ಮಾಹಿತಿ ನೀಡುವಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.
ಬೆಂಗಳೂರಿನ ಹೊರ ವಲಯದ ಖಾಸಗಿ ರೆಸಾರ್ಟ್‌ನಲ್ಲಿಂದು ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಜತೆ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯಿಂದ ಯಾರೆಲ್ಲ ಹೆಸರನ್ನು ತೆಗೆಯಲಾಗಿದೆ. ಕಾಂಗ್ರೆಸ್ ಪರ ಇರುವ ಮತದಾರರ ಹೆಸರುಗಳನ್ನು ತೆಗೆದು ಹಾಕಲಾಗಿದೆಯೇ? ಇದೆಲ್ಲವನ್ನು ಪರಿಶೀಲಿಸಿ ೧೦ ದಿನಗಳ ಒಳಗೆ ಮಾಹಿತಿ ನೀಡಿ ಎಲ್ಲ ಮಾಹಿತಿಗಳನ್ನು ಕ್ರೋಢಿಕರಿಸಿ ಚುನಾವಣಾ ಆಯೋಗಕ್ಕೆ ಪರಿಷ್ಕೃತ ಮತದಾರರ ಪಟ್ಟಿಯ ಲೋಪದ ಬಗ್ಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಟಿಕೆಟ್ ಬಯಸಿರುವ ಪ್ರತಿಯೊಬ್ಬ ಆಕಾಂಕ್ಷಿಗಳು ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯ ಅಕ್ರಮಗಳ ಬಗ್ಗೆ ಗಮನ ಹರಿಸಿ ಕಾಂಗ್ರೆಸ್ ಪರ ಇರುವ ಮತದಾರರ ಹೆಸರುಗಳು ತೆಗೆದು ಹಾಕಿದ್ದರೆ ಅದನ್ನು ಪುನಃ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಆಸಕ್ತಿ ವಹಿಸಿ ಎಂದು ಡಿ.ಕೆ. ಶಿವಕುಮಾರ್ ಟಿಕೆಟ್ ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಒಂದೊಂದು ಕ್ಷೇತ್ರಕ್ಕೂ ಐದಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಹಿನ್ನೆಲೆ ಕ್ಷೇತ್ರದಲ್ಲಿ ಅವರಿಗಿರುವ ಮತದಾರರ ಒಲವು ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಅಂತಿಮವಾಗಿ ಹೈಕಮಾಂಡ್ ಪ್ರತಿ ಕ್ಷೇತ್ರಕ್ಕೂ ಅಭ್ಯರ್ಥಿಗಳ ಆಯ್ಕೆ ಮಾಡುತ್ತದೆ. ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಟಿಕೆಟ್ ಸಿಕ್ಕಿಲ್ಲ ಎಂದು ಚುನಾವಣಾ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಡಿ.ಕೆ. ಶಿವಕುಮಾರ್ ಟಿಕೆಟ್ ಆಕಾಂಕ್ಷಿಗಳಿಗೆ ಹೇಳಿದರು.
ಟಿಕೆಟ್ ಬಯಸಿರುವ ಅಭ್ಯರ್ಥಿಗಳು ಒಗ್ಗಟ್ಟಾಗಿ ಕ್ಷೇತ್ರದಲ್ಲಿ ಓಡಾಡಿ ಪಕ್ಷ ಸಂಘಟಿಸಿ ಉಳಿದಿದ್ದನ್ನು ನಮಗೆ ಬಿಡಿ, ನಾವು ಯಾರಿಗೆ ಟಿಕೆಟ್ ಎಂಬುದನ್ನು ಶಿಫಾರಸ್ಸು ಮಾಡುತ್ತೇವೆ. ಟಿಕೆಟ್ ನೀಡಿಕೆಯಲ್ಲಿ ಗೆಲುವೇ ಮಾನದಂಡ ಎಂದು ಡಿ.ಕೆ ಶಿವಕುಮಾರ್ ಸಭೆಯಲ್ಲಿ ಹೇಳಿದರು.
೧,೨೦೦ಕ್ಕೂ ಹೆಚ್ಚು ಅರ್ಜಿ ೨೩ ಕೋಟಿ ಸಂಗ್ರಹ
ರಾಜ್ಯದ ೨೨೪ ಕ್ಷೇತ್ರಗಳಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿ ೧೨೩೦ ಅರ್ಜಿಗಳು ಸಲ್ಲಿಕೆಯಾಗಿವೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಹಾಲಿ ಶಾಸಕರು ಟಿಕೆಟ್ ಅರ್ಜಿ ಹಾಕಿದ್ದಾರೆ,’ ಚುನಾವಣಾ ಟಿಕೆಟ್ ಬೇಕಾದರೆ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗಾಗಿ, ಕಾಂಗ್ರೆಸ್‌ನ ಟಿಕೆಟ್ ಬಯಸಿರುವ ಎಲ್ಲ ದೊಡ್ಡ ನಾಯಕರುಗಳು ಅರ್ಜಿ ಹಾಕಿದ್ದಾರೆ. ಟಿಕೆಟ್‌ಗೆ ಅರ್ಜಿ ಸಲ್ಲಿಸಲು ನ. ೫ ರಿಂದ ೨೧ರವರೆಗೂ ಅವಕಾಶ ನೀಡಲಾಗಿದೆ. ಒಟ್ಟು ೧,೩೧೧ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಪಡೆದಿದ್ದರು. ಈ ಪೈಕಿ ೧೨೦ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿಗೆ ೫ ಸಾವಿರ ರೂ. ನಿಗದಿ ಮಾಡಲಾಗಿತ್ತು. ಅರ್ಜಿ ಸಲ್ಲಿಸುವಾಗ ೨ ಲಕ್ಷ ರೂ. ಡಿಡಿ ಸಲ್ಲಿಸಬೇಕಿತ್ತು. ಎಸ್‌ಸಿ/ಎಸ್‌ಟಿ ಸಮುದಾಯದ ಆಕಾಂಕ್ಷಿಗಳಿಗೆ ೧ ಲಕ್ಷ ರೂ. ಮೊತ್ತ ನಿಗದಿ ಮಾಡಲಾಗಿತ್ತು. ಟಿಕೆಟ್ ಆಕಾಂಕ್ಷಿಗಳಿಂದಲೇ ಸುಮಾರು ೨೩ ಕೋಟಿ ರೂ.ನಷ್ಟು ಹಣ ಕಾಂಗ್ರೆಸ್ ಖಾತೆಗೆ ಜಮಾ ಆಗಿದೆ.

ಪಕ್ಷ ಮುಖ್ಯ, ವ್ಯಕ್ತಿಯಲ್ಲ
ಮುಂದಿನ ವಿಧಾನಸಭಾ ಚುನಾವಣೆಗೆ ವ್ಯಕ್ತಿ ನೋಡಿ ಟಿಕೆಟ್ ನೀಡುವುದಿಲ್ಲ. ಪಕ್ಷ ಮುಖ್ಯ, ಪಕ್ಷ ಅಧಿಕಾರಕ್ಕೆ ಬರಬೇಕು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕ್ಷೇತ್ರಕ್ಕೆ ಒಂದೇ ಟಿಕೆಟ್, ಯಾರೇ ಆದರೂ ಒಬ್ಬರಿಗೆ ಮಾತ್ರ ಟಿಕೆಟ್. ಉಳಿದವರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಅಧಿಕಾರ ಸಿಕ್ಕೇ ಸಿಗುತ್ತದೆ ಎಂದರು.
ಟಿಕೆಟ್ ಆಕಾಂಕ್ಷಿಗಳಿಂದ ದೇಣಿಗೆ ಸಂಗ್ರಹಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆಯೂ ಪಕ್ಷಕ್ಕೆ ಹಲವಾರು ಮಂದಿ ದೇಣಿಗೆ ನೀಡಿದ್ದಾರೆ. ಆಗ ಹೆಚ್ಚು ಸುದ್ದಿಯಾಗಿರಲಿಲ್ಲ. ಈಗ ಸುದ್ದಿಯಾಗಿದೆ. ಚುನಾವಣಾ ತಯಾರಿ, ಜಿಲ್ಲೆ ಹಾಗೂ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಸೇರಿದಂತೆ ಹಲವು ವಿಚಾರಗಳಿಗೆ ಆರ್ಥಿಕ ಶಕ್ತಿ ಬೇಕಾಗಿದೆ. ಹಾಗೆಯೇ ಕಾರ್ಯಕರ್ತರಿಗೆ ತೊಂದರೆಯಾದಾಗ ಅವರಿಗೆ ಸಹಾಯ ಮಾಡಲು ಹಣದ ಅಗತ್ಯವಿದೆ. ಹೀಗಾಗಿ, ದೇಣಿಗೆಯನ್ನು ಸಂಗ್ರಹಿಸಲಾಗಿದೆ ಎಂದರು.ಇಂದಿನ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಯಾವುದೇ ವಿಚಾರಗಳ ಚರ್ಚೆ ಇರುವುದಿಲ್ಲ. ಆಕಾಂಕ್ಷಿಗಳಿಗೆ ಕೆಲವು ಮಾರ್ಗದರ್ಶನ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.