ಕೈನಿಂದ ಭರಪೂರ ಭರವಸೆ

ರೈತರ ಕಲ್ಯಾಣಕ್ಕೆ ಒತ್ತು
ಬೆಂಗಳೂರು,ಮೇ ೨: ೨೦೦ ಯುನಿಟ್ ಉಚಿತ ವಿದ್ಯುತ್‌ನ ಗೃಹಜ್ಯೋತಿ, ನಿರುದ್ಯೋಗ ಯುವ ನಿಧಿ, ೧೦ ಕೆಜಿ ಉಚಿತ ಅಕ್ಕಿಯ ಅನ್ನಭಾಗ್ಯ, ಪ್ರತಿ ಮನೆಯಜಮಾನಿಗೆ ಮಾಸಿಕ ೨ ಸಾವಿರ ರೂ. ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್‌ಪಾಸ್‌ನ ಶಕ್ತಿ ಗ್ಯಾರೆಂಟಿ ಯೋಜನೆ ಜತೆಗೆ ವಿವಿಧ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇ. ೫೦ ರಿಂದ ಶೇ. ೭೫ಕ್ಕೆ ಏರಿಸುವ ಭ್ರಷ್ಟಾಚಾರ ನಿಗ್ರಹಕ್ಕೆ ಹೊಸ ಕಾನೂನು, ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿ, ಅಂಗನವಾಡಿ ಕಾರ್ಯಕರ್ತೆಯರಿಗೆ ೧೫ ಸಾವಿರ ರೂ. ಮಾಸಿಕ ಗೌರವಧನ, ಬಿಜೆಪಿ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆ, ನೂತನ ಶಿಕ್ಷಣ ನೀತಿ ರದ್ದು, ರೈತರಿಗೆ ೧೦ ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಹಾಲಿನ ಪ್ರೋತ್ಸಾಹ ದರ ೫ ರಿಂದ ೭ ರೂ.ಗೆ ಏರಿಕೆ, ನೀರಾವರಿ ಯೋಜನೆಗೆ ೧.೫ ಲಕ್ಷ ಕೋಟಿ ವೆಚ್ಚ, ಕೃಷಿ ಉತ್ಪನ್ನಗಳ ಬೆಲೆ ನಿಗಿದಿಗೆ ಪ್ರತಿ ವಿಭಾಗದಲ್ಲೂ ಕೃಷಿ ಬೆಲೆ ಆಯೋಗ ಸ್ಥಾಪನೆ, ಭಜರಂಗ ದಳ ಮತ್ತು ಪಿಎಫ್‌ಐ ನಿಷೇಧ, ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ಹೆಚ್ಚುವರಿ ವೇತನ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಸೇರಿದಂತೆ ಹತ್ತು ಹಲವು ಭರವಸೆಗನ್ನೊಳಗೊಂಡ ಸರ್ವಜನಾಂಗದ ಶಾಂತಿಯ ತೋಟ ಶೀರ್ಷಿಕೆಯ ವಿಧಾನಸಭಾ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಇಂದು ಬಿಡುಗಡೆ ಮಾಡಿದೆ. ಈ ಮೂಲಕ ಭರಪೂರ ಕೊಡುಗೆಗಳನ್ನು ನೀಡಿದೆ.
ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲು ಶತಪ್ರಯತ್ನ ನಡೆಸಿರುವ ಕಾಂಗ್ರೆಸ್, ಈ ಚುನಾವಣಾ ಪ್ರಣಾಳಿಕೆಯಲ್ಲಿ ರೈತರು, ಮಹಿಳೆಯರು, ಯುವಕರು, ಪರಿಶಿಷ್ಟ ವರ್ಗ, ಪಂಗಡ ಸೇರಿದಂತೆ ಎಲ್ಲ ವರ್ಗಗಳನ್ನು ಓಲೈಸಲು ಹಲವು ಯೋಜನೆಗಳನ್ನು ಜಾರಿ ಮಾಡುವ ಭರವಸೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದೆ.
ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ, ಕೈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಗಳ ಜಾರಿ ಮಾಡುತ್ತೇವೆ, ಇದು ನನ್ನ ವಾಗ್ದಾನ ಎಂದರು.
ಈ ಚುನಾವಣಾ ಪ್ರಣಾಳಿಕೆಯಲ್ಲಿ ಹತ್ತು ಹಲವು ಜನಪರ ಭರವಸೆಗಳನ್ನು ನೀಡಿದ್ದೇವೆ. ಈ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಈಡೇರಿಸದ ಭರವಸೆಗಳನ್ನು ನಾವು ನೀಡಿಲ್ಲ ಎಂದವರು ಹೇಳಿದರು.
ಮೀಸಲಾತಿ ಹೆಚ್ಚಳ ಜಾತಿ ಗಣತಿ ವರದಿ ಜಾರಿ
ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. ೧೫ ರಿಂದ ಶೇ. ೧೭ಕ್ಕೆ. ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. ೩ ರಿಂದ ೭ಕ್ಕೆ, ಮುಸ್ಲಿಮರಿಗೆ ಶೇ. ೪ರ ಮೀಸಲಾತಿ ಮರುಸ್ಥಾಪನೆ, ಲಿಂಗಾಯತ, ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. ೫೦ ರಿಂದ ೭೫ಕ್ಕೆ ಹೆಚ್ಚಿಸಲು ಕ್ರಮಕೈಗೊಳ್ಳುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರ ಸಿದ್ಧಪಡಿಸಿದ ಹಿಂದುಳಿದ ವರ್ಗಗಳ ಜನಗಣತಿ ವರದಿಯನ್ನು ಅನುಷ್ಠಾನಕ್ಕೆ ತರುವುದಾಗಿಯೂ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ.
ಪರಿಶಿಷ್ಟ ಜಾತಿ ಪಂಗಡದ ಯುವಕರಿಗೆ ಟ್ಯಾಕ್ಸಿ, ಆಟೋ, ಸರಕು ಸಾಗಾಣೆ ವಾಹನ ಖರೀದಿಗೆ. ಶೇ. ೩ರ ಬಡ್ಡಿ ದರದಲ್ಲಿ ಸಾಲ, ಡಾ. ಭೀಮ್‌ರಾವ್ ಅಂಬೇಡ್ಕರ್ ಉದ್ಯಮಶೀಲತ ನಿಧಿ ಸ್ಥಾಪನೆ. ಎಸ್‌ಸಿ, ಎಸ್‌ಟಿ ಕಾಯ್ದೆಯ ಸೆಕ್ಷನ್ ೭ಡಿ ರದ್ದುಪಡಿಸುವ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ.
ರೈತರಿಗೆ ಆದ್ಯತೆ
ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ರೈತರ ಕಲ್ಯಾಣಕ್ಕೆ ಹಲವು ಯೋಜನೆಗಳ ಜಾರಿ ಭರವಸೆ ನೀಡಿದ್ದು, ಅದರಂತೆ ರೈತರಿಗೆ ಬಡ್ಡಿರಹಿತ ಸಾಲವನ್ನು ೩ ಲಕ್ಷದಿಂದ ೧೦ ಲಕ್ಷಕ್ಕೆ ವಿಸ್ತರಣೆ, ಶೇ. ೩ರ ಬಡ್ಡಿ ದರದಲ್ಲಿ ೧೫ ಲಕ್ಷದವರೆಗೂ ಸಾಲ, ಹಾಲಿನ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್‌ಗೆ ೫ ರೂ.ನಿಂದ ೭ರೂ.ಗೆ ಏರಿಕೆ, ಪ್ರತಿವಿಭಾಗದಲ್ಲೂ ಕೈಷಿ ಬೆಲೆ ಆಯೋಗ ಸ್ಥಾಪನೆ, ಸ್ವಾಮಿನಾಥನ್ ವರದಿಯಂತೆ ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ, ಕೃಷಿ ಸಂಬಂಧಿತ ಸ್ಟಾರ್ಟಪ್ ಮತ್ತು ಸಂಶೋಧನೆಗಳ ಉತ್ತೇಜನಕ್ಕೆ ೫೦೦ ಕೋಟಿ ರೂ.ಗಳ ಕೃಷಿ ಉನ್ನತೀ ನಿಧಿ, ಗ್ರಾಮೀಣ ಪ್ರದೇಶಗಳಿಗೆ ೩ಪೇಸ್‌ನಲ್ಲಿ ಹಗಲು ಹೊತ್ತಿನಲ್ಲಿ ೮ ಗಂಟೆ ವಿದ್ಯುತ್ ಪೂರೈಕೆಯ ಭರವಸೆ ಜತೆಗೆ ಪ್ರತಿ ಜಿಲ್ಲೆಗೆ ೧ ರೈತ ಮಾಲ್‌ಗಳ ಪ್ರಾರಂಭದ ಭರವಸೆಯನ್ನೂ ನೀಡಿದೆ.
ಕಾಯ್ದೆ ರದ್ದು
ಬಿಜೆಪಿ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳು, ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ರದ್ಧತಿ ಜತೆಗೆ ರೈತರ ವಿರುದ್ಧ ದಾಖಲಾಗಿರುವ ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂತೆಯುವ ಭರವಸೆಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ.
ಹಳೆ ಪಿಂಚಣಿ ಜಾರಿ
೨೦೦೬ ರ ನಂತರ ಸರ್ಕಾರಿ ಉದ್ಯೋಗಕ್ಕೆ ಸೇರಿರುವ ನೌಕರರಿಗೆ ಎನ್‌ಪಿಎಸ್ ರದ್ದು ಮಾಡಿ ಹಳೆ ಪಿಂಚಣಿ ಜಾರಿ ಮಾಡುವ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ. ಹಾಗೆಯೇ, ರಾತ್ರಿ ಪಾಳಿಯ ಪೊಲೀಸ್ ಸಿಬ್ಬಂದಿಗೆ ೫ ಸಾವಿರ ವಿಶೇಷ ಮಾಸಿಕ ಭತ್ಯೆ, ಎಲ್ಲ ಪೊಲೀಸರಿಗೆ ವರ್ಷಕ್ಕೆ ೧ ತಿಂಗಳ ಹೆಚ್ಚುವರಿ ಪಾವತಿ ಭರವಸೆಯನ್ನು ನೀಡಿದೆ.
ಭ್ರಷ್ಟಾಚಾರ ನಿಗ್ರಹಕ್ಕೆ ಹೊಸ ಕಾಯ್ದೆ.
ಭ್ರಷ್ಟಾಚಾರ ನಿಗ್ರಹಕ್ಕೆ ಹೊಸ ಕಾಯ್ದೆಯನ್ನು ಜಾರಿಗೆ ತಂದು ಲೋಕೋಪಯೋಗಿ ಗ್ರಾಮೀಣಾಭಿವೃದ್ಧಿ, ನೀರಾವರಿ, ನಗರಾಭಿವೃದ್ಧಿ, ಇಂಧನ ಇಲಾಖೆಗಳಲ್ಲಿ ಟೆಂಡರ್‌ಗಳಲ್ಲಿ ಪಾರದರ್ಶಕ ವ್ಯವಸ್ಥೆ ಮತ್ತು ಬಿಲ್‌ಗಳ ಪಾವತಿಯಲ್ಲೂ ಪಾರದರ್ಶಕತೆ ಜಾರಿ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.
ಕನಕಪುರದಲ್ಲಿ ಅತ್ಯಾಧುನಿಕ ವಿಶ್ವದರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ, ಬಿಜೆಪಿ ಸರ್ಕಾರ ಜಾರಿಗೆ ತಂದ ಜನವಿರೋಧಿ ಕಾಯ್ದೆಗಳ ರದ್ದು, ಭಜರಂಗದಳ ಮತ್ತು ಪಿಎಫ್‌ಐಗಳ ನಿಷೇಧ ಪ್ರಸ್ತಾವವನ್ನು ಪ್ರಣಾಳಿಕೆಯಲ್ಲಿ ಮಾಡಲಾಗಿದೆ.
ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಳ
ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ೧೧,೫೦೦ ರಿಂದ ೧೫ ಸಾವಿರಕ್ಕೆ ಹೆಚ್ಚಳ, ಮಿನಿ ಅಂಗನವಾಡಿ ಕಾರ್ಯಕರ್ತರ ವೇತನ ೭,೫೦೦ ರಿಂದ ೧೦ ಸಾವಿರಕ್ಕೆ ಹೆಚ್ಚಳ ಮತ್ತು ಇವರುಗಳಿಗೆ ೨ ಲಕ್ಷ ರೂ. ವಿಶ್ರಾಂತಿ ವೇತನ ನೀಡುವುದಾಗಿ ಕಾಂಗ್ರೆಸ್ ಹೇಳಿದೆ.
ಆಶಾಕಾರ್ಯಕರ್ತೆಯರ ಮಾಸಿಕ ಗೌರವ ಧನ ೫ ರಿಂದ ೮ಕ್ಕೆ ಹೆಚ್ಚಳ, ಬಿಸಿಯೂಟ ಅಡುಗೆಯವರ ಮಾಸಿಕ ಗೌರವಧನ ೩,೬೦೦ ರಿಂದ ೬ ಸಾವಿರಕ್ಕೆ ಹೆಚ್ಚು ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.
ನೀರಾವರಿ ಯೋಜನೆಗಳಿಗೆ ೫ ವರ್ಷಗಳಲ್ಲಿ ೧.೫ ಲಕ್ಷ ಕೋಟಿ ರೂ. ಒದಗಿಸುವ ಜತೆಗೆ ಮೇಕೆದಾಟು, ಮಹಾದಾಯಿ ಯೋಜನೆ ಜಾರಿ, ಎತ್ತಿನಹೊಳೆ ಯೋಜನೆಯನ್ನು ೨ ವರ್ಷದಲ್ಲಿ ಸಂಪೂರ್ಣಗೊಳಿಸುವ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ.
ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ನೂತನ ಶಿಕ್ಷಣ ನೀತಿ ರದ್ದು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮುಖಂಡರಾದ ರಾಣಿ ಸತೀಶ್ ಮತ್ತಿತರರು ಇದ್ದಾರೆ.

ಪಿಯುಸಿಯಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್, ಬಿಪಿಎಲ್ ಕುಟುಂಬದ ಮಕ್ಕಳಿಗೆ ವಿದ್ಯಾರ್ಥಿವೇತನ ೧೫ ರಿಂದ ೨೦ಕ್ಕ ಹೆಚ್ಚಳ, ವಿಶ್ವವಿದ್ಯಾಲಯಗಳ ಉನ್ನತೀಕರಣಕ್ಕೆ ೨ ಸಾವಿರ ಕೋಟಿಗಳ ಆವರ್ತನಿಧಿ, ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಭರವಸೆ ನೀಡಿದೆ.
ನೂತನ ಶಿಕ್ಷಣ ನೀತಿ ರದ್ದು
ಬಿಜೆಪಿ ಸರ್ಕಾರ ಜಾರಿ ಮಾಡುವ ನೂತನ ಶಿಕ್ಷಣ ನೀತಿಯನ್ನು ರದ್ದು ಮಾಡಿ ಕರ್ನಾಟಕ ಶೀಕ್ಷಣ ನೀತಿಯ ಅನುಷ್ಠಾನದ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ.
ಎಲ್ಲ ವಿಭಾಗಗಳಲ್ಲೂ ಆಸ್ಪತ್ರೆ
ಪ್ರತಿ ಕಂದಾಯ ವಿಭಾಗಗಳಲ್ಲಿ ತಲಾ ೧ ಜಯದೇವ ರೀತಿಯ ಹೃದ್ರೋಗ, ಕಿದ್ವಾಯಿ ಮಾದರಿಯ ಕ್ಯಾನ್ಸರ್, ನಿಮ್ಹಾನ್ಸ್ ಮಾದರಿಯ ಮನೋರೋಗ ಮತ್ತು ಮಿದುಳು ಚಿಕಿತ್ಸಾ ಆಸ್ಪತ್ರೆ ಸ್ಥಾಪನೆಯ ಭರವಸೆ ಜತೆಗೆ ಡಾ. ಪುನೀತ್‌ರಾಜ್‌ಕುಮಾರ್ ಹೃದಯ ಆರೋಗ್ಯ ಯೋಜನೆ ಜಾರಿ ಮಾಡುವ ಭರವಸೆಯನ್ನು ನೀಡಿದೆ.
ಬಡವರ ಮನೆ ನಿರ್ಮಾಣ ಯೋಜನೆಯ ಸಬ್ಸಿಡಿಯನ್ನು ೩ ಲಕ್ಷಕ್ಕೆ ಹೆಚ್ಚಳ, ರಾಜ್ಯಸರ್ಕಾರದಿಂದ ನಿರ್ಮಿಸುವ ವಸತಿ ಯೋಜನೆಗಳ ಸಬ್ಸಿಡಿ ೩.೫ಲಕ್ಷಕ್ಕ ನಿಗದಿ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.
ಮಂಗಳಮುಖಿಯರಿಗಾಗಿ ಮಂಡಳಿ ಸ್ಥಾಪಿಸುವ ಭರವಸೆಯನ್ನು ಕಾಂಗ್ರೆಸ್ ನೀಡಿ ಪೌರ ಕಾರ್ಮಿಕರ ಖಾಯಂ ಹಾಗೂ ಪೌರಕಾರ್ಮಿಕರಿಗೆ ೧೦ ಲಕ್ಷಗಳ ವಿಮಾ ಯೋಜನೆ ಭರವಸೆಯನ್ನು ನೀಡಿದೆ.
ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಬಾರಿ ನೆರವಿನ ರೂಪದಲ್ಲಿ ೨೦ ಸಾವಿರ ಅನುದಾನ, ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಂಡಳಿ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಹೋಂಸ್ಟೇ ಮಾಲೀಕರಿಗೆ ಶೇ. ೫ರ ಬಡ್ಡಿ ದರದಲ್ಲಿ ೧೦ ಲಕ್ಷ ಸಾಲ. ಸಣ್ಣ ವ್ಯಾಪಾರಿಗಳಿಗೆ ಮತ್ತು ಅಂಗಡಿಗಳಿಗೆ ಕಡಿಮೆ ಬಡ್ಡಿ ದರದಲ್ಲಿಸಾಲ ನೀಡಲು ೧ ಸಾವಿರ ಕೋಟಿ ರೂ ಕಲ್ಯಾಣ ನಿಧಿ ಸ್ಥಾಪನೆ ಸ್ವಯಂ ಉದ್ಯೋಗದಲ್ಲಿ ತೊಡಗುವ ಸಣ್ಣ ಹೋಟೆಲ್/ ಬೇಕರಿ/ಸಿಹಿ ತಿನಿಸು ಮಳಿಗೆ ಸ್ಥಾಪನೆಗೆ ಶೇ. ೬ರಷ್ಟು ಬಡ್ಡಿ ದರದಲ್ಲಿ ೧೦ ರೂ.ವರೆಗೆ ಸಾಲ ಭರವಸೆಯನ್ನು ಕಾಂಗ್ರೆಸ್ ನೀಡಿದೆ.
ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ದಾದಿಯರು, ಅಂಗನವಾಡಿ ಆಶಾಕಾರ್ಯಕರ್ತರಿಗೆ ಶೇ ೫೦ರಷ್ಟು ಎಲೆಕ್ಟ್ರಿಕ್ ವಾಹನ ಕೊಂಡುಕೊಳ್ಳಲು ಸಹಾಯ ಧನ, ಪತ್ರಕರ್ತರ ಕಲ್ಯಾಣ ನಿಧಿ ಸ್ಥಾಫನೆಗೆ ೫೦೦ ಕೋಟಿ ಮೀಸಲು, ವಕೀಲರ ಸಂರಕ್ಷಣಾ ಕಾಯ್ದೆ ಜಾರಿ ಭರವಸೆಯನ್ನೂ ನೀಡಿದೆ.
ಉದ್ಯೋಗ ಭರ್ತಿ
೧ ವರ್ಷದಲ್ಲಿ ಸರ್ಕಾರದ ೨.೫ ಲಕ್ಷಗಳ ಹುದ್ದೆಗಳ ಭರ್ತಿ, ಭಾಷೆ, ಸಾಹಿತ್ಯ, ಸಂಪ್ರದಾಯ ಮತ್ತು ಸಂಸ್ಕೃತಿಗೆ ಸಂಬಂಧೀಸಿದಂತೆ ಹಲವು ಯೋಜನೆಗಳ ಜಾರಿ ಭರವಸೆಯನ್ನೂ ಕಾಂಗ್ರೆಸ್ ನೀಡಿದೆ.
ಅರ್ಚಕರ ಗೌರವ ಧನ ಏರಿಕೆ
ರಾಜ್ಯದ ಎಲ್ಲ ದೇವಸ್ಥಾನ ಮಠಗಳ ನವೀಕರಣಕ್ಕೆ ೧ ಸಾವಿರ ಕೋಟಿ ಮೀಸಲು ೬೦ ವರ್ಷ ಮೀರಿದ ಅರ್ಚಕರಿಗೆ ಮಾಸಿಕ ೫ ಸಾವಿರ ಗೌರವ ಧನ, ಗ್ರಾಮಮಟ್ಟದಲ್ಲಿ ನಡೆಯುವ ಗ್ರಾಮದೇವತೆ ಮತ್ತು ತೇರುಗಳ ಹಬ್ಬಗಳಿಗೆ ೨೦ ಸಾವಿರ ರೂ. ದೇಣಿಗೆ ನೀಡುವ ಭರವಸೆಯನ್ನೂ ನೀಡಿದೆ. ಹಾಗೆಯೇ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮೈಸೂರು ಕರ್ನಾಟಕ ಮತ್ತು ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಹಲವು ಯೋಜನೆಗಳನ್ನು ಜಾರಿ ಮಾಡುವ ಭರವಸೆ ನೀಡಿದ್ದು, ಇಂದಿರಾ ಕ್ಯಾಂಟೀನ್‌ನನ್ನು ಪುನರ್ ಸ್ಥಾಪಿಸುವುದಾಗಿ ವಾಗ್ದಾನ ಮಾಡಿದೆ.