ಕೈನಿಂದ ದ್ವೇಷ ರಾಜಕಾರಣ

ಬೆಂಗಳೂರು, ಮೇ ೨೩- ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ತನಿಖೆ ನಡೆಸುವುದಾಗಿ ಕಾಂಗ್ರೆಸ್ ನಾಯಕರು ಹೇಳಿರುವುದರಲ್ಲಿ ಆಶ್ಚರ್ಯ ತರುವಂತದ್ದೇನಿಲ್ಲ. ಎಲ್ಲ ನಿರೀಕ್ಷಿತ. ಇದು ದ್ವೇಷದ ರಾಜಕಾರಣ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.
ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ವಿಧಾನಸೌಧಕ್ಕೆ ಆಗಮಿಸಿ ವಿಧಾನಸೌಧದ ಮೆಟ್ಟಿಲುಗಳಿಗೆ ಹಣೆಮುಟ್ಟಿಸಿ ನಮಸ್ಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣಗಳ ತನಿಖೆ ನಡೆಸುವ ಕಾಂಗ್ರೆಸ್ ನಾಯಕರ ಹೇಳಿಕೆ ದ್ವೇಷ ರಾಜಕಾರಣ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಇದೆಲ್ಲ ನಿರೀಕ್ಷಿತ ಎಂದರು.
ಈ ಹಿಂದೆಯೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಇದನ್ನು ನಾವು ಮರೆತಿಲ್ಲ ಎಂದು ಹೇಳಿದರು.
ಆಡಳಿತ ಪಕ್ಷದವರು ಎಲ್ಲರನ್ನು ಸಮಾನವಾಗಿ ನಡೆಸಿಕೊಳ್ಳಬೇಕು. ಪ್ರಗತಿಯಲ್ಲಿರುವ ಕಾಮಗಾರಿಗಳಿಗೂ ಅನುದಾನ ತಡೆ ಹಿಡಿಯುವುದು ಸರಿಯಲ್ಲ. ಕಾಂಗ್ರೆಸ್‌ನವರು ನಾವು ಏನು ಅಂದುಕೊಂಡಿದ್ದೀವೋ ಆ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಮುದಾಯದವರಿಗೆ ಉನ್ನತ ಸ್ಥಾನ ಕೊಡದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಅತಿ ಹೆಚ್ಚು ಲಿಂಗಾಯತ ಶಾಸಕರೇ ಇದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಒತ್ತಡ ಹಾಕುವುದು ಬೇಡ. ಕನಿಷ್ಠ ಡಿಸಿಎಂ ಸ್ಥಾನಕ್ಕಾದರೂ ಒತ್ತಡವಾದರೂ ಹಾಕಬಹುದಾಗಿತ್ತು. ಇದನ್ನು ನಾನು ಹೇಳುತ್ತಿಲ್ಲ. ರಾಜ್ಯದ ಜನ ಹೇಳುತ್ತಿದ್ದಾರೆ ಎಂದರು.