
ಹುಬ್ಬಳ್ಳಿ, ಮೇ ೪: ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಹಾರ ಮಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಸ್.ಡಿ.ಪಿ.ಐ ಮತ್ತು ಪಿ.ಎಪ್.ಐ. ನ ಕಪಿಮುಷ್ಠಿಯಲ್ಲಿದ್ದು ಅದರಿಂದ ಹೊರಬರಲು ಸಾಧ್ಯವಿಲ್ಲ ಎಂದು ನುಡಿದರು.
ಪಿ.ಎಫ್.ಐ.ನ ಇನ್ನೊಂದು ರೂಪವೇ ಎಸ್.ಡಿ.ಪಿ.ಐ. ಕಾಂಗ್ರೆಸ್‌ನ ಕಾಲದಲ್ಲಿ ಇವು ಪ್ರಬಲವಾಗಿ ಬೆಳಿದಿದ್ದವು ಎಂದ ಅವರು, ಎಸ್.ಡಿ.ಪಿ.ಐ ಬೆಂಬಲವನ್ನು ಕಾಂಗ್ರೆಸ್ ಬಹಿರಂಗವಾಗಿಯೇ ಕೇಳಿತ್ತು. ಆದರೆ ಅವರು ಕೊಡುವುದಿಲ್ಲ ಎಂದಿದ್ದಾರೆ. ನಾವ್ಯಾಕೆ ನಿಮಗೆ ರಕ್ಷಣೆ ಕೊಡಬೇಕೆಂದು ಪಿ.ಎಫ್.ಐ ನಾಯಕರೇ ಪ್ರಶ್ನಿಸಿದ್ದಾರೆ ಎಂದು ಹೇಳಿದರು.
ಎಸ್‌ಡಿಪಿಐ ಬಿಜೆಪಿಯ ಬಿ ಟೀಂ ಅಲ್ಲ. ಬಿ ಟೀಂ ಆಗಿದ್ದರೆ ನಾವು ಪಿಎಫ್‌ಐನ ಬ್ಯಾನ್ ಮಾಡುತ್ತಿರಲಿಲ್ಲ ಎಂದು ಅವರು ನುಡಿದರು.
ಬಜರಂಗದಳ ವಿಚಾರದಲ್ಲಿ ಡಿ.ಕೆ. ಶಿವಕುಮಾರ ಎತ್ತಿದ ಪ್ರಶ್ನೆಗೆ ಕಿಡಿಕಾರಿದ ಅವರು, ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಖಂಡಿಸಿದರು.
ಭಜರಂಗದಳಕ್ಕೂ ಆಂಜನೇಯನಿಗೂ ಏನು ಸಂಬಂಧ? ಎಂದು ಡಿಕೆಶಿ ಪ್ರಶ್ನಿಸುತ್ತಾರೆ ಎಂದ ಅವರು, ರಾಮನಿಗೂ ಹನುಮನಿಗೂ ಏನು ಸಂಬಂಧ ಇದಿಯೋ ಅದೇ ಸಂಬಂಧ ಆಂಜನೇಯನಿಗೂ ಬಜರಂಗದಳಕ್ಕೂ ಇದೆ. ಇದನ್ನು ಕಾಂಗ್ರೆಸ್‌ನವರು ಅರ್ಥ ಮಾಡಿಕೊಳ್ಳಬೇಕು ಎಂದರು.
ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿ ಮಾತನಾಡುವುದು ಸರಿಯಲ್ಲ. ನಾವು ನಮ್ಮ ಕಾರ್ಯಕ್ರಮಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ. ಅವರು ಅವರ ಭರವಸೆಗಳ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಅನವಶ್ಯಕವಾಗಿ ಕೆದಕಿ ಚುನಾವಣೆಯ ವಾತಾವರಣವನ್ನು ಜಾತಿ, ಧರ್ಮ, ಕೋಮು ಭಾವನೆಗಳಿಂದ ಕೆರಳಿಸುವುದು ಸರಿಯಲ್ಲ ಎಂದು ಅವರು ನುಡಿದರು.
ಸೋನಿಯಾಗಾಂಧಿಯವರ ಹುಬ್ಬಳ್ಳಿ ಭೇಟಿ ವಿಷಯ ಕುರಿತು ಪ್ರತಿಕ್ರಿಯಿಸುತ್ತ ಅವರು ಬರಲಿ, ಬಂದರೆ ನಾವು ಕಾಂಗ್ರೆಸ್ ನಾಯಕರ ರೀತಿ ಅಳುವುದಿಲ್ಲ. ಮೋದಿ, ಅಮೀತ್ ಶಾ ಏಕೆ ಬಂದರೆಂದು ಕಾಂಗ್ರೆಸ್‌ನವರು ಕೇಳಿದಂತೆ ಕೇಳುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.