(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೫:ಶಕ್ತಿ, ಯುವನಿಧಿ, ಗೃಹಲಕ್ಷ್ಮಿ ಸೇರಿ ೫ ಗ್ಯಾರಂಟಿಗಳ ಆಮಿಷವೊಡ್ಡಿ ರಾಜ್ಯಸರ್ಕಾರ ಅಧಿಕಾರಕ್ಕೆ ಬಂದು ರಾಜ್ಯದ ಜನರಿಗೆ ಮೋಸ ಮಾಡಿದೆ ಎಂದು ಬಿಜೆಪಿ ಶಾಸಕ ಆರ್. ಅಶೋಕ್ ಅವರು ಆರೋಪಿಸಿದರು.ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಗ್ಗೆ ನಿಲುವಳಿ ಮಂಡಿಸಿ ೫ ಗ್ಯಾರಂಟಿಗಳನ್ನು ವಾರಂಟಿ ಮಾಡದೆ ರಾಜ್ಯಸರ್ಕಾರ ಜನರಿಗೆ ಮೋಸ ಮಾಡಿದೆ ಎಂದು ತರಾಟೆಗೆ ತೆಗೆದುಕೊಂಡರು.ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವು ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಅಧಿಕಾರಕ್ಕೆ ಬಂದ ೨೪ ಗಂಟೆಗಳೊಳಗೆ ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಹೇಳಿ ವಂಚನೆ ನಡೆಸಿದೆ ಎಂದು ದೂರಿದರು.ರಾಜ್ಯಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆದರೂ ಗ್ಯಾರಂಟಿಗಳ ಗೊಂದಲ ಮುಂದುವರೆದಿದೆ. ಶಕ್ತಿ ಯೋಜನೆಯಲ್ಲಿ ಎಲ್ಲ ಸರ್ಕಾರಿ ಬಸ್‌ಗಳಲ್ಲಿ ಮಹಳೆಯರಿಗೆ ಉಚಿತ ಪ್ರಯಾಣ ಎಂದು ನೀಡಿದ್ದ ಗ್ಯಾರಂಟಿಯನ್ನು ವಾರಂಟಿ ಮಾಡದೆ ರಾಜಹಂಸ, ಹವಾನಿಯಂತ್ರಿತ, ಅಂಬಾರಿ ಇನ್ನಿತರ ಬಸ್‌ಗಳಲ್ಲಿ ಉಚಿತ ಪ್ರಯಾಣವಿಲ್ಲದೆ ಮೋಸ ಮಾಡಿದೆ ಎಂದು ದೂರಿದರು.ಗ್ಯಾರಂಟಿ ಮೇಲೆ ಅಧಿಕಾರಕ್ಕೆ ಬಂದ ರಾಜ್ಯಸರ್ಕಾರ, ಗೃಹಜ್ಯೋತಿಗೆ ೧೨ ತಿಂಗಳ ಸರಾಸರಿಯನ್ನು ತೆಗೆದುಕೊಳ್ಳುವುದಾಗಿ ಹೇಳಿದೆ. ಎಲ್ಲ ನಿರುದ್ಯೋಗಿಗಳಿಗೆ ಯುವನಿಧಿ ಜಾರಿಗೊಳಿಸುವುದಾಗಿ ಹೇಳಿ ಅದಕ್ಕೆ ೨೦೨೨-೨೩ರ ಸಾಲನ್ನು ಪರಿಗಣಿಸುವುದಾಗಿ ಹೇಳಿದೆ.ಗೃಹಲಕ್ಷ್ಮಿಯಡಿ ಎಲ್ಲ ಮಹಿಳೆಯರಿಗೆ ೨ ಸಾವಿರ ಪ್ರತಿ ತಿಂಗಳು ನಿಗದಿಮಾಡುವುದಾಗಿ ಹೇಳಿ ಅದನ್ನು ಮನೆಯ ಯಜಮಾನಿಗೆ ಮಾತ್ರ ಎಂದು ಹೇಳುವ ಮೂಲಕ ಮಾತು ತಪ್ಪಿದೆ ಎಂದು ತರಾಟೆಗೆ ತೆಗೆದುಕೊಂಡರು.ಅನ್ನಭಾಗ್ಯ ಯೋಜನೆಯಲ್ಲೂ ಗೊಂದಲ ಸೃಷ್ಟಿಸಲಾಗಿದೆ. ಕೇಂದ್ರದ ೫ ಕೆಜಿ ಅಕ್ಕಿಯ ಜತೆಗೆ ರಾಜ್ಯಸರ್ಕಾರ ೧೦ ಕೆಜಿ ಅಕ್ಕಿ ನೀಡಬೇಕು, ಆದರೆ, ಅದರಲ್ಲೂ ಜನರಿಗೆ ಮೋಸ ಮಾಡಲಾಗಿದೆ ಎಂದು ದೂರಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಗ್ಯಾರಂಟಿಯನ್ನು ಯಥಾಸ್ಥಿತಿಯಲ್ಲಿ ಜಾರಿಗೊಳಿಸಲು ೬೦ ಸಾವಿರ ಕೋಟಿ ಮಾತ್ರ ಅಲ್ಲ, ೧ ಲಕ್ಷ ಕೋಟಿ ಬೇಕಾಗಲಿದ್ದು, ಇದು ಸಾಧ್ಯವೇ? ಎಂದು ಪ್ರಶ್ನಿಸಿದರು.ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನರನ್ನು ಗೊಂದಲಕ್ಕೆ ಸಿಲುಕಿಸಿ ಕುಟುಂಬದಲ್ಲಿ ಜಗಳ ಹಚ್ಚುವ ಮೂಲಕ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಹರಿಹಾಯ್ದರು.ಗ್ಯಾರಂಟಿಗಳನ್ನು ಜಾರಿಗೊಳಿಸದೆ ಕಾಂಗ್ರೆಸ್ ಸರ್ಕಾರ ಕೆಲವೇ ದಿನಗಳಲ್ಲಿ ಜನರ ವಿಶ್ವಾಸ ಕಳೆದುಕೊಂಡಿರುವುದು ನಾಡಿಗೆ ಬಂದಿರುವ ರ್ದೌಭಾಗ್ಯ ಎಂದರು.ಗ್ಯಾರಂಟಿಗಳ ಬಗ್ಗೆ ನಿಲುವಳಿಯನ್ನು ಅಶೋಕ್ ಮಂಡಿಸುವಾಗ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಗದ್ದಲ-ಮಾತಿನ ಚಕಮಕಿ, ಕೋಲಾಹಲವುಂಟಾಯಿತು.ಅಶೋಕ್ ಪರವಾಗಿ ವಿರೋಧ ಪಕ್ಷದವರು ಆಡಳಿತ ಪಕ್ಷದ ಪರವಾಗಿ ಕಾಂಗ್ರೆಸ್ ಶಾಸಕರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದರು.