
ಮೇ ೨೦ ಪದಗ್ರಹಣ
ಬೆಂಗಳೂರು,ಮೇ೧೮:ಕಾಂಗ್ರೆಸ್‌ನ ಜೋಡೆತ್ತುಗಳಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸಲಿದ್ದು, ಈ ಇಬ್ಬರು ತಲಾ ಎರಡೂವರೆ ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಲಿದ್ದಾರೆ.
ಮೊದಲ ಅವಧಿಯ ಎರಡೂವರೆ ವರ್ಷಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದು, ನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಕಾರ್ಯಾಭಾರ ನಿಭಾಯಿಸುವರು.ನವದೆಹಲಿಯಲ್ಲಿಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ರವರನ್ನು ಆಯ್ಕೆ ಮಾಡಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದರು.ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ ಏಕೈಕ ಡಿಸಿಎಂ ಆಗಲಿದ್ದು, ೨೦೨೪ರ ಲೋಕಸಭಾ ಚುನಾವಣೆಯವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮ ಮೇ ೨೦ ಶನಿವಾರ ೧೨.೩೦ಕ್ಕೆ ನಡೆಯಲಿದ್ದು, ಈ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕೆಲ ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸುವರು ಎಂದರು
ಹಗ್ಗ-ಜಗ್ಗಾಟಕ್ಕೆ ತೆರೆ
ನೂತನ ಮುಖ್ಯಮಂತ್ರಿಯ ಆಯ್ಕೆ ಕಗ್ಗಂಟಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪಟ್ಟು ಸಡಿಲಿಸದೆ ನಾನೇ ಮುಖ್ಯಮಂತ್ರಿ ಎಂಬ ತಮ್ಮ ನಿಲುವನ್ನು ಸಡಿಲಿಸದೇ ಇದ್ದದ್ದು ಹೈಕಮಾಂಡ್‌ಗೆ ತಲೆನೋವು ತಂದಿತ್ತು. ಈ ಇಬ್ಬರನ್ನೂ ಸಮಾಧಾನಪಡಿಸಿ ಸರ್ವಸಮ್ಮತವಾದ ರಾಜಿ ಸೂತ್ರವನ್ನು ಹೈಕಮಾಂಡ್ ರೂಪಿಸಿ ಅದರಂತೆ ತಲಾ ೩೦ ತಿಂಗಳ ಕಾಲ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆಯ ತೀರ್ಮಾನವನ್ನು ಮಾಡಿದ್ದು, ಇದಕ್ಕೆ ಇಬ್ಬರು ನಾಯಕರು ಸಮ್ಮತಿಸಿರುವುದು ಮುಖ್ಯಮಂತ್ರಿ ಆಯ್ಕೆಯ ಪ್ರಹಸನಗಳಿಗೆ ತೆರೆ ಬಿದ್ದಂತಾಗಿದೆ.
ಮೊದಲ ಅವಧಿಗೆ ಸಿದ್ದು ಸಿಎಂ-ಡಿಕೆಶಿ ಡಿಸಿಎಂ
ಹೈಕಮಾಂಡ್‌ನ ಸಂಧಾನ ಸೂತ್ರದಂತೆ ಮೊದಲ ಎರಡೂವರೆ ವರ್ಷಗಳ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದು, ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗುವರು. ಎರಡೂವರೆ ವರ್ಷಗಳ ನಂತರ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್‌ರವರಿಗೆ ಪಟ್ಟ ಬಿಟ್ಟುಕೊಡುವರು. ಕೊನೆಯ ಎರಡೂವರೆ ವರ್ಷಕ್ಕೆ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗುವರು.
ಇಂದು ಶಾಸಕಾಂಗ ಸಭೆ ಅಧಿಕೃತ ಘೋಷಣೆ
ಬೆಂಗಳೂರಿನಲ್ಲಿ ಇಂದು ಸಂಜೆ ೭ ಗಂಟೆಗೆ ಕೆಪಿಸಿಸಿಯ ನೂತನ ಕಚೇರಿ ಇಂದಿರಾ ಭವನದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಹೈಕಮಾಂಡ್‌ನ ಸೂತ್ರದ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟು ಅಧಿಕಾರ ಹಂಚಿಕೆಯ ತೀರ್ಮಾನವನ್ನು ಅಧಿಕೃತವಾಗಿ ಪ್ರಕಟಿಸಿ ನಂತರ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯರವರನ್ನು ಆಯ್ಕೆ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.
ಸೋನಿಯಾ ಮಧ್ಯ ಪ್ರವೇಶ ಎಲ್ಲವೂ ಸುಗಮ
ಕಳೆದ ೪ ದಿನಗಳಿಂದ ದೆಹಲಿಯಲ್ಲಿ ಮುಖ್ಯಮಂತ್ರಿ ಗಾದಿಯ ಆಯ್ಕೆಗೆ ಹಲವು ಸರಣಿ ಸಭೆಗಳು ನಡೆದವಾದರೂ ಒಮ್ಮತದ ತೀರ್ಮಾನ ಸಾಧ್ಯವಾಗದೆ ಮುಂದೇನು ಎಂಬ ಚಿಂತೆ ಹೈಕಮಾಂಡ್‌ನನ್ನು ಕಾಡಿತ್ತು. ಕೊನೆಗೆ ಸೋನಿಯಾಗಾಂಧಿ ಅವರು ರಂಗಪ್ರವೇಶಿಸಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯರವರ ಜತೆ ನಿನ್ನೆ ತಡರಾತ್ರಿ ದೂರವಾಣಿಯಲ್ಲಿ ಮಾತನಾಡಿದ ನಂತರ ಈ ಇಬ್ಬರು ನಾಯಕರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗುವ ಮನಃಸ್ಥಿತಿಗೆ ಬಂದರು.ಹೈಕಮಾಂಡ್‌ನ ಅಧಿಕಾರ ಹಂಚಿಕೆಯ ಸೂತ್ರಕ್ಕೂ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಗಾದಿಯ ಜಟಾಪಟಿಗೆ ತೆರೆ ಬಿದ್ದಂತಾಗಿದೆ.
ಉಪಾಹಾರ ಸಭೆ, ಒಮ್ಮತ
ಹೈಕಮಾಂಡ್‌ನ ಸಂಧಾನಸೂತ್ರದ ಬಗ್ಗೆ ಇಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ದೆಹಲಿಯ ತಮ್ಮ ನಿವಾಸದಲ್ಲಿ ಉಪಾಹಾರ ಸಭೆಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರನ್ನು ಆಹ್ವಾನಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಇಬ್ಬರ ನಡುವೆ ಒಮ್ಮತ ಮೂಡಿಸಿ ಹೈಕಮಾಂಡ್ ಸಂಧಾನಸೂತ್ರವನ್ನು ಮನವರಿಕೆ ಮಾಡಿಕೊಟ್ಟರು.
ಈ ಉಪಾಹಾರ ಸಭೆಯ ನಂತರ ಸಿದ್ದರಾಮಯ್ಯ-ಡಿಕೆಶಿ ಒಂದೇ ಕಾರಿನಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ನಿವಾಸಕ್ಕೆ ತೆರಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂಬ ಸಂದೇಶ ರವಾನಿಸಿದರು.
ಎರಡನೇ ಬಾರಿಗೆ ಸಿದ್ದು ಸಿಎಂ, ಡಿಕೆಶಿ ಮೊದಲ ಬಾರಿಗೆ ಡಿಸಿಎಂ
ಕಾಂಗ್ರೆಸ್ ಹೈಕಮಾಂಡ್‌ನ ತೀರ್ಮಾನದಂತೆ ಎರಡೂವರೆ ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಲಿರುವ ಸಿದ್ದರಾಮಯ್ಯರವರು ೨ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿದ್ದಾರೆ. ಹಾಗೆಯೇ ಡಿ.ಕೆ. ಶಿವಕುಮಾರ್ ಇದೇ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ದಾರೆ.
ಈ ಮೊದಲು ೨೦೧೩ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯರವರು ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿ ೫ ವರ್ಷಗಳ ಕಾಲ ಅಧಿಕಾರದ ಗದ್ದುಗೆಯಲ್ಲಿದ್ದರು. ನಂತರ ೨೦೧೮ರಲ್ಲಿ ಕಾಂಗ್ರೆಸ್ ಪಕ್ಷ ಸೋತು ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದಾಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಈಗ ೨೦೨೩ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿದ್ದು, ಈಗ ಸಿದ್ದರಾಮಯ್ಯ ೨ನೇ ಬಾರಿ ಮುಖ್ಯಮಂತ್ರಿ ಗಾದಿ ಅಲಂಕರಿಸಿದ್ದಾರೆ.
ಡಿಕೆಶಿ ಮೊದಲ ಬಾರಿಗೆ ಡಿಸಿಎಂ
ರಾಜ್ಯರಾಜಕಾರಣದಲ್ಲಿ ೩೫ ವರ್ಷಕ್ಕೂ ಹೆಚ್ಚು ಕಾಲ ರಾಜಕಾರಣದಲ್ಲಿ ಸಕ್ರಿಯರಾಗಿ ೮ನೇ ಬಾರಿಗೆ ವಿಧಾನಸಭೆಗೆ ಸತತವಾಗಿ ಆಯ್ಕೆಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದೇ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಪಟ್ಟಕ್ಕೇರುತ್ತಿದ್ದಾರೆ. ಈ ಹಿಂದೆ ಎಸ್. ಬಂಗಾರಪ್ಪ, ಎಸ್.ಎಂ ಕೃಷ್ಣ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ ಶಿವಕುಮಾರ್ ಸಚಿವರಾಗಿ ಪ್ರಬಲ ಖಾತೆಗಳನ್ನು ನಿಭಾಯಿಸಿದ್ದರು.