ಟೆಲ್ ಅವೀವ್, ಅ.೨೯- ಗಾಝಾ ಪಟ್ಟಿಯ ಮೇಲೆ ಭಾರೀ ಪ್ರಮಾಣದಲ್ಲಿ ಇಸ್ರೇಲ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಹಮಾಸ್ ಪಡೆ ಕಂಗೆಟ್ಟಿದ್ದು, ಕೈದಿಗಳ ವಿನಿಯಮ ಒಪ್ಪಂದಕ್ಕೆ ಮುಂದಾಗಿದೆ.
ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಸಂದರ್ಭದಲ್ಲಿ ೨೦೦ಕ್ಕೂ ಹೆಚ್ಚು ನಾಗರಿಕರನ್ನು ಒತ್ತೆಯಾಳಾಗಿ ಸೆರೆಹಿಡಿದು, ಅಪಹರಿಸಿದ್ದರು. ಆದರೆ ಸದ್ಯ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಮನಬಂದಂತೆ ದಾಳಿ ನಡೆಸಿ, ಹಮಾಸ್ ಉಗ್ರರ ಸುರಂಗಗಳ ಮೇಲೆ ಭೀಕರವಾಗಿ ದಾಳಿ ನಡೆಸಲಾಗುತ್ತಿದೆ. ಸದ್ಯ ಇದರಿಂದ ಕಂಗೆಟ್ಟಿರುವ ಹಮಾಸ್ ಪಡೆ ಇದೀಗ ಕೈದಿಗಳ ವಿನಿಯಮಕ್ಕೆ ಒಪ್ಪಂದಕ್ಕೆ ಹೆಚ್ಚಿನ ಆಸಕ್ತಿ ವಹಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್, ಪ್ಯಾಲೇಸ್ಟಿನಿಯನ್ ಪ್ರತಿರೋಧ ಸೆರೆ ಹಿಡಿದಿರುವ ಎಲ್ಲಾ ಒತ್ತೆಯಾಳುಗಳ ಬದಲಾಗಿ ಇಸ್ರೇಲಿ ಜೈಲುಗಳಿಂದ ಎಲ್ಲಾ ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡುವ ತಕ್ಷಣದ ಕೈದಿಗಳ ವಿನಿಮಯ ಒಪ್ಪಂದವನ್ನು ನಡೆಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಹಮಾಸ್ ತಮ್ಮ ಬಳಿ ಇರುವ ಕೆಲವು ಮಂದಿ ಇಸ್ರೇಲ್‌ನ ಒತ್ತೆಯಾಳುಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಸದ್ಯ ೨೦೦ಕ್ಕೂ ಹೆಚ್ಚಿನ ಸಂಖ್ಯೆಯ ನಾಗರಿಕರು ಬಂಧಿಯಲ್ಲಿದ್ದಾರೆ. ಅದೂ ಅಲ್ಲದೆ ಹಮಾಸ್ ಅನೇಕ ಉಗ್ರರನ್ನು ಇಸ್ರೇಲಿ ಸೇನಾಪಡೆ ಬಂಧಿಸಿ, ಸೆರೆಮನೆಯಲ್ಲಿ ಇಟ್ಟಿದ್ದು, ಸದ್ಯ ಇವರ ಬಿಡುಗಡೆ ಹಮಾಸ್ ಪಡೆ ಶತಪ್ರಯತ್ನ ನಡೆಸುತ್ತಿದೆ. ಸದ್ಯ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಇಸ್ರೇಲ್ ತನ್ನ ಜೈಲಿನಲ್ಲಿರುವ ಹಮಾಸ್ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಕೇಳಿದೆ. ಆದರೆ ಈ ಒಪ್ಪಂದಕ್ಕೆ ಇಸ್ರೇಲ್ ಒಪ್ಪಿಗೆ ಸೂಚಿಸಲಿದೆಯೇ ಎಂಬುದು ಮುಂದೆ ತಿಳಿದು ಬರಲಿದೆ.