ಕೈಗೆ ಹೊಂದಾಣಿಕೆ ರಾಜಕಾರಣ ಅಗತ್ಯವಿಲ್ಲ

ಬೆಂಗಳೂರು,ಜೂ.೧೪:ಬಿಜೆಪಿಯ ನಾಯಕರ ಜತೆ ಕಾಂಗ್ರೆಸ್‌ನ ಕೆಲ ನಾಯಕರು ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ ಎಂಬ ಆರೋಪಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಳ್ಳಿ ಹಾಕಿದ್ದು, ಬಿಜೆಪಿ ನಾಯಕರ ಜತೆ ಹೊಂದಾಣಿಕೆ ರಾಜಕಾರಣ ಮಾಡುವ ಅಗತ್ಯ ಕಾಂಗ್ರೆಸ್‌ಗೆ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಎಣ್ಣೆ-ಸೀಗೆಕಾಯಿ ಇದ್ದಂತೆ ಹೊಂದಾಣಿಕೆಯಾಗಲು ಸಾಧ್ಯವಿಲ್ಲ ಎಂದರು.
ಬಿಜೆಪಿಯ ಕೆಲ ಅತಿರಥ-ಮಹಾರಥ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಕೆಲ ನಾಯಕರ ಜತೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ ಎಂಬ ಬಿಜೆಪಿ ಸಿ.ಟಿ ರವಿ ಅವರ ಹೇಳಿಕೆಗೆ ಕಿಡಿಕಾರಿದ ಅವರು, ಸಿ.ಟಿ ರವಿ ಚುನಾವಣೆಯಲ್ಲಿ ಸೋತಿದ್ದಾರೆ. ಹಾಗಾಗಿ. ಹೊಟ್ಟೆ ಉರಿಗೆ ಏನೇನೋ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಜನತೆಯ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಬಿಜೆಪಿ ಮತ್ತು ಇತರ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಅವರು ಮಾರ್ಮಿಕವಾಗಿ ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆಯ ಸಭೆ ಪೂರ್ವ ನಿಯೋಜನೆಯಾಗಿರಲಿಲ್ಲ. ಅಲ್ಲಿ ಯಾವುದೇ ಚರ್ಚೆಯಾಗಿರಲಿಲ್ಲ. ಕಾಫಿ ಕುಡಿದು ಹೋದೆವು ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಅಧಿಕಾರಿಗಳೊಂದಿಗೆ ಬಿಜೆಪಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಸಭೆ ನಡೆಸಿರುವ ಬಗ್ಗೆ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೂರು ಕೊಡಲಿ ಬಿಡಿ, ಬಿಜೆಪಿ ಈಗ ವಿರೋಧ ಪಕ್ಷದಲ್ಲಿದೆ. ಬಿಜೆಪಿ ನಾಯಕರು ಹಿಂದೆ ಮಾಡಿದ್ದನ್ನು ಮರೆತುಹೋಗಿದ್ದಾರೆ ಎಂದು ಹೇಳಿದರು.