ಕೈಗೆ ಸಿಗದ ಅಧಿಕಾರಿಗಳು; ಗ್ರಾಮಸ್ಥರ ಅಲೆದಾಟ

ಗಬ್ಬೂರು.ಜೂ.೦೮-ದೇವದುರ್ಗ ತಾಲೂಕಿನಾದ್ಯಂತ ೩೩ಗ್ರಾಮ ಪಂಚಾಯತಿಗಳಿದ್ದು,ಪಿಡಿಓ ಸೇರಿ ಯಾವುದೇ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ಕೈಗೆ ಸಿಗುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಅಧಿಕಾರಿಗಳನ್ನು ಹುಡುಕಿಕೊಂಡು ತಾಲೂಕು ಕೇಂದ್ರ ದೇವದುರ್ಗ ಪಟ್ಟಣದಲ್ಲಿ ಬೀದಿ ಬೀದಿ ಅಲೆದಾಡುವಂತಾಗಿದೆ.
ಗ್ರಾಮ ಪಂಚಾಯತಿಯಲ್ಲಿ ಒಬ್ಬ ಪಿಡಿಓ,ಕಾರ್ಯದರ್ಶಿ,ಗ್ರಾಪಂ ಅಭಿಯಂತರ(ಇಂಜಿನಿಯರ್), ಕರವಸೂಲಿಗಾರರು,ಕಂಪ್ಯೂಟರ್ ಆಪರೇಟರ್, ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ವಾಟರ್ ಮ್ಯಾನ್ ಗಳು ಇರುತ್ತಾರೆ.ಆದರೆ ಇವರಲ್ಲಿ ಯಾರೊಬ್ಬರೂ ಗ್ರಾಪಂ ಕಾರ್ಯಲಯಕ್ಕೆ ಬರುವುದಿಲ್ಲ.ಇನ್ನೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಇಲಾಖೆಯಿಂದ ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ.ಒಮ್ಮೊಮ್ಮೆ ನಾಟ್ರಿಚೇಬಲ್, ಸ್ವಿಚ್ಚಾಫ್ ಇರುತ್ತವೆ. ಬೇರೆ ದಾರಿ ಇಲ್ಲದೆ ಗ್ರಾಮೀಣ ಜನರು ಅಧಿಕಾರಿಗಳನ್ನು ಹುಡುಕಿಕೊಂಡು ತಾಲೂಕು ಪಂಚಾಯತಿ ಕಛೇರಿಗೆ ಬಂದು ಕಾಯುತ್ತಾರೆ.ಇಲ್ಲವೇ ಅವರು ಇರಬಹುದಾದ ಸ್ಥಳಗಳ ಮಾಹಿತಿ ಪಡೆದು ಹುಡುಕುತ್ತ ಅಲೆಯುತ್ತಾರೆ.
ಕೊವೀಡ್ ನಿಯಮ ಉಲ್ಲಂಘನೆ: ಗ್ರಾಮ ಪಂಚಾಯಿತಿಗಳಲ್ಲಿ ಕೊವೀಡ್ ನಿಯಮಗಳಿಗೆ ಬೆಲೆಯೇ ಇಲ್ಲ. ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ ಘಂಟೆವರೆಗೆ ಅಧಿಕಾರಿಗಳು ಕಛೇರಿಯಲ್ಲಿರಬೇಕು ಇಲ್ಲವೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಬೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿಬೇಕು. ತಿಂಗಳಿಗೊಮ್ಮೆ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಕರೆಯಬೇಕು. ಗ್ರಾಪಂಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಗಳ ವ್ಯವಹಾರದ ದಾಖಲೆಗಳನ್ನು ನಿರ್ವಹಿಸಬೇಕು,ಚೆಕ್ ರಿಜಿಸ್ಟರ್ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಪ್ರತಿಯೊಂದಕ್ಕೂ ಗ್ರಾಮ ಸಭೆ ನಡೆಸಬೇಕು.
ಆದರೆ ಅಧಿಕಾರಿಗಳು ಇಂತಹ ಯಾವುದೇ ಸಭೆ ಮಾಡುತ್ತಿಲ್ಲ.ಅಧಿಕಾರಿಗಳು ಕಛೇರಿಯಲ್ಲಿ ಸಿಗುವುದೆ ಅಪರೂಪವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಪಿಡಿಓಗಳ ಕೊರತೆ: ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಪಿಡಿಓಗಳ ಹುದ್ದೆ ಖಾಲಿ ಇವೆ.೩೩ ಪಂಚಾಯತಿಗಳ ಪೈಕಿ ಕೇವಲ೧೮ರಿಂದ೨೦ ಜನ ಪಿಡಿಓಗಳ ಮಾತ್ರ ಕೆಲಸ ಮಾಡುತ್ತಾರೆ. ಒಬ್ಬ ಪಿಡಿಓಗೆ ಎರಡೆರಡು ಪಂಚಾಯತಿ ಜವಾಬ್ದಾರಿ ನೀಡಲಾಗಿದೆ ಕೆಲ ಗ್ರಾಪಂಗಳಿಗೆ ಅಲ್ಲಿನ ಕಾರ್ಯದರ್ಶಿಗಳೇ ಪಿಡಿಓಗಳಾಗಿದ್ದಾರೆ. ಇನ್ನೂ ಕೆಲವಡೆ ಅನಧಿಕೃತವಾಗಿ ಕರ ವಸೂಲಿಗಾರರನ್ನೂ ಹಾಗೂ ಕಂಪ್ಯೂಟರ್ ಆಪರೇಟರ್ ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇವರು ಆಡಿದ್ದೇ ಆಟ ಎನ್ನುವಂತಾಗಿದೆ. ಕಂಪ್ಯೂಟರ್ ಆಪರೇಟರ್ ಗಳಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಗಳು ಕೇಳಿ ಬಂದಿವೆ. ಹಣ ವಸೂಲಿ: ಕಛೇರಿಗೆ ಬಾರದ ಗ್ರಾಪಂ ಅಧಿಕಾರಿಗಳು ಮತ್ತು ಕಂಪ್ಯೂಟರ್ ಆಪರೇಟರ್ ಗಳು ಪಟ್ಟಣದಲ್ಲಿ ಖಾಸಗಿ ಕಂಪ್ಯೂಟರ್ ಅಂಗಡಿಗಳಲ್ಲಿ ಹಾಗೂ ನೆಟ್ಕೆಫೆಗಳಲ್ಲಿ ವ್ಯಾಸ್ತವ್ಯ ಹೂಡುತ್ತಾರೆ.
ಜಾಬ್ ಕಾರ್ಡ್ ಮಾಡಲು,ಆಧಾರ ಮತ್ತು ಬ್ಯಾಂಕ್ ಖಾತೆ ಜೋಡಣೆ, ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳ ಎನ್‌ಎಂಆರ್ ತೆಗೆಯುವುದು ಸೇರಿದಂತೆ ಗ್ರಾಪಂ ಕೆಲಸಗಳೆಲ್ಲವೂ ಖಾಸಗಿ ನೆಟ್ಕೆಫೆಗಳಲ್ಲಿ ಮಾಡುತ್ತಾರೆ.ಇದಕ್ಕೆ ಕೂಲಿ ಕಾರ್ಮಿಕರು, ಗ್ರಾಮಸ್ಥರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ತಾಲೂಕು ಪಂಚಾಯತಿಗೆ ಅನೇಕ ದೂರು ಕೊಟ್ಟರು ಇಒ ಪಂಪಾಪತಿ ಹೀರೆಮಠ ಮತ್ತು ಎಡಿ ಬಸಣ್ಣ ನಾಯಕ ಇವರಿಬ್ಬರ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ಕೊತ್ತದೊಡ್ಡಿ ಗ್ರಾಪಂ ಸದಸ್ಯನಾದ ಆಂಜನೇಯ ನಾಯಕ ಕಾಟಮಳ್ಳಿ ಆಕ್ರೋಶ ವ್ಯಕ್ತಪಡಿಸಿದರು.