ಕೈಗೆ ಮತ ನೀಡಿದರೆ ಭ್ರಷ್ಟಾಚಾರಕ್ಕೆ ಹಾದಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೧೧:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿದರೆ ಅದು ಭ್ರಷ್ಟಾಚಾರಕ್ಕೆ ಹಾದಿಯಾಗುತ್ತದೆ. ದೇಶದ ಅಭದ್ರತೆಗೆ ಕಾರಣವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೊಡುವ ಒಂದೊಂದು ಮತವು ಆರ್ಥಿಕ ದಿವಾಳಿತನ, ಭ್ರಷ್ಟಾಚಾರ, ದೇಶದ ಅಭದ್ರತೆಗೆ ಕೊಡುವ ಮತ ಆಗುತ್ತದೆ ಎಂದು ಬಣ್ಣಿಸಿದರು.
ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂಬುದನ್ನೇ ಕಾಂಗ್ರೆಸ್ ನಾಯಕರು ಮರೆತಿದ್ದಾರೆ. ರಾಹುಲ್ ಅವರ ನಾಯಕತ್ವ ಸಂಪೂರ್ಣ ಕುಸಿದಿದೆ. ಅವರ ಹೆಸರನ್ನೇ ಕಾಂಗ್ರೆಸ್ ನಾಯಕರು ಹೇಳುತ್ತಿಲ್ಲ. ವಿಶ್ವಾಸಾರ್ಹ ನಾಯಕತ್ವ ಇಲ್ಲದ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಜನರ ವಿಶ್ವಾಸ ಗಳಿಸಬಹುದು ಎಂಬ ಭ್ರಮೆಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಮುಂದಿಟ್ಟು ಬಿಜೆಪಿ ಮತ ಕೇಳುತ್ತಿದೆ. ೭ ಕೋಟಿ ಹೊಸ ಉದ್ಯೋಗಗಳ ಸೃಷ್ಟಿಯಾಗಿದೆ. ೨೦೦೭ರಲ್ಲಿ ೫ ಕೋಟಿ ಎಂಎಸ್‌ಎಂಇ ಇದ್ದವು. ಈಗ ೨೦೨೪ರಲ್ಲಿ ೬.೩ ಕೋಟಿ ಎಂಎಸ್‌ಎಂಇ ಹೆಚ್ಚಳವಾಗಿದೆ. ಹೆಚ್‌ಎಎಲ್ ಮುಚ್ಚುತ್ತಾರೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದರು. ರಾಹುಲ್ ಅವರೇ ಈ ಮಾತನ್ನು ಹೇಳಿದ್ದರು. ಡಿ.ಕೆ ಶಿವಕುಮಾರ್ ಅವರು ರಾಹುಲ್ ಅವರಿಂದ ಕ್ಷಮೆ ಕೇಳಿಸುತ್ತಾರಾ ಎಂದು ಹರಿಹಾಯ್ದರು.
ಕಳೆದ ೧೦ ತಿಂಗಳಲ್ಲಿ ಸಿದ್ದರಾಮಯ್ಯರವರ ಸರ್ಕಾರ ಎಷ್ಟು ಉದ್ಯೋಗ ಸೃಷ್ಟಿಸಿದೆ. ಸಚಿವರಾದ ಎಂ.ಬಿ.ಪಾಟೀಲ್ ಪ್ರಿಯಾಂಕ ಖರ್ಗೆ ಅವರ ಎಕ್ಸ್‌ಖಾತೆಯಲ್ಲಿ ಮಾತ್ರ ಉದ್ಯೋಗವಿದೆ ಎಂದು ವ್ಯಂಗ್ಯವಾಡಿದರು.
ಈ ರಾಜ್ಯಸರ್ಕಾರ ದಿವಾಳಿಯಾಗಿದೆ. ಹಾಗಾಗಿಯೇ ನಾನು ಮುಖ್ಯಮಂತ್ರಿಯಾಗಿದ್ದಾಗ ಕಿಸಾನ್‌ಸಮ್ಮಾನ್ ಯೋಜನೆಯಡಿ ಕೇಂದ್ರದ ೬ ಸಾವಿರದ ಜತೆಗೆ ರಾಜ್ಯದ ೪ ಸಾವಿರ ಕೊಡುತ್ತಿದ್ದನ್ನು ನಿಲ್ಲಿಸಿದ್ದಾರೆ. ಇದೇ ಈ ಸರ್ಕಾರದ ಸಾಧನೆ ಎಂದು ಟೀಕಿಸಿದರು.
ಪ್ರಧಾನಿ ಮೋದಿ ಅವರ ಅಧಿಕಾರಾವಧಿಯಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ೨೯ ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಉಚಿತ ಪಡಿತರ ವ್ಯವಸ್ಥೆ, ರಾಮಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಕಾರಿಡಾರ್, ಆಯುಷ್ಮಾನ್ ಭಾರತ್ ಯೋಜನೆ, ಕೋವಿಡ್ ಲಸಿಕೆ ನೀಡಿಕೆ ೩೭೦ನೇ ವಿಧಿ ರದ್ದು, ಹೀಗೆ ನೂರಾರು ಸಾಧನೆಗಳನ್ನು ಮುಂದಿಟ್ಟು ಮತ ಕೇಳುತ್ತಿದ್ದೇವೆ ಎಂದರು.
ಶೌಚಾಲಯ ನಿರ್ಮಾಣದಿಂದ ಹಿಡಿದು ವಿಮಾನ ನಿಲ್ದಾಣದವರೆಗೆ ಕೇಂದ್ರ ಸರ್ಕಾರದ ಸಾಧನೆಗಳು ಇವೆ. ಕಾಂಗ್ರೆಸ್‌ಗೆ ಕೊಡುವ ಮತ ಭ್ರಷ್ಟಾಚಾರದ ಆಜಾಗರೂಕತೆಗೆ ನಾಂದಿ ಹಾಡುತ್ತದೆ ಎಂದು ಎಚ್ಚರಿಕೆ ವಹಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಬಿಜೆಪಿ ಕಾಂಗ್ರೆಸ್ ಪಕ್ಷದಂತೆ ಸುಳ್ಳು ಆಶ್ವಾಸನೆ ಕೊಡಲ್ಲ, ಈ ಬಾರಿಯ ಚುನಾವಣೆ ದೇಶದ ರಕ್ಷಣೆಗೆ ನಡೆಯುತ್ತಿರುವ ಚುನಾವಣೆ ಎಂದರು.
ಒಕ್ಕಲಿಗ ಮತ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಕ್ಕಲಿಗ ಸಮಾಜ ಸೇರಿದಂತೆ ಎಲ್ಲ ಸಮಾಜ ಒಂದಾಗಿ ಬಿಜೆಪಿ ಪರ ಇದ್ದಾರೆ. ಡಿ.ಕೆ ಶಿವಕುಮಾರ್ ಅವರು ಮಠಕ್ಕೆ ಹೋಗಿ ಮಾತನಾಡಲಿ ಅವರು ಎಲ್ಲದರಲ್ಲೂ ಪ್ರವೀಣರಿದ್ದಾರೆ ಎಂದು ವ್ಯಂಗ್ಯವಾಡಿದರು.
ಇಂದಿನಿಂದ ರಾಜ್ಯಪ್ರವಾಸ ಆರಂಭಿಸುತ್ತಿದ್ದೇನೆ ೨೮ ಕ್ಷೇತ್ರಗಳಲ್ಲಿ ಬಿಜೆಪಿ -ಜೆಡಿಎಸ್ ಗೆಲ್ಲಲಿದೆ ಎಂದರು. ಶಿವಮೊಗ್ಗದಲ್ಲಿ ಮಾಜಿ ಸಚಿವ ಈಶ್ವರಪ್ಪ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅದು ಅವರ ವೈಯಕ್ತಿಕ ನಿರ್ಧಾರ ಎಂದಷ್ಟೆ ಪ್ರತಿಕ್ರಿಯಿಸಿದರು.