ಕೈಗೆ ಅಧಿಕಾರ ಸಿಗಲ್ಲ: ಗ್ಯಾರಂಟಿಗಳು ಜಾರಿಯಾಗಲ್ಲ

ಮೋದಿ ವಾಗ್ದಾಳಿ
ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಜನಸ್ತೋಮದತ್ತ ಪ್ರಧಾನಿ ನರೇಂದ್ರ ಮೋದಿ ಕೈ ಬೀಸಿದರು. ಕೇಂದ್ರ ಸಚಿವ ನಾರಾಯಣಸ್ವಾಮಿ ಮತ್ತಿತರರು ಇದ್ದಾರೆ.

ಚಿತ್ರದುರ್ಗ,ಮೇ.೨-ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಅಂಶ ಕಾಂಗ್ರೆಸ್ ನಾಯಕರಿಗೆ ತಿಳಿದಿದೆ. ಹೀಗಾಗಿ ಮತದಾರರಿಗೆ ಸುಳ್ಳಿನ ಗ್ಯಾರಂಟಿಗಳನ್ನು ನೀಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿಯ ಎಲ್ಲಾ ಯೋಜನೆಗಳನ್ನು ನಾಶ ಮಾಡುತ್ತದೆ. ಹೀಗಾಗಿ ಡಬಲ್ ಇಂಜಿನ್ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡ್ಯೂಯಬೇಕು ಎಂದು ರಾಜ್ಯದ ಜನತೆಗೆ ಕರೆ ನೀಡಿದರು.
ಮೊನ್ನೆಯಷ್ಟೇ ರಾಜ್ಯದಲ್ಲಿ ಬಹಿರಂಗ ಸಮಾವೇಶ ಬೆಂಗಳೂರು ಮತ್ತು ಮೈಸೂರಿನಲ್ಲಿ ರೋಡ್ ಶೋ ಹಾಗೂ ಮತಬೇಟೆ ಬೆನ್ನೆಲ್ಲೇ ಇಂದು ಮತ್ತೆ ರಾಜ್ಯಕ್ಕೆ ಲಗ್ಗೆ ಹಾಕಿರುವ ನರೇಂದ್ರ ಮೋದಿಯವರು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.
ಸಮಾವೇಶದಲ್ಲಿ ಮೋದಿಯವರಿಗೆ ಶೆಂಗಾದಿಂದ ತಯಾರಿಸಿದ ಪೇಟ ತೊಡಿಸಿ ಮದಕರಿನಾಯಕನ ಪ್ರತಿಮೆ ನೀಡಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಸಮಾವೇಶದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ, ಸಂಸದ ಜಿ.ಎಂ ಸಿದ್ದೇಶ್ವರ್, ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿರುವ ಜಿ.ಎಚ್.ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಚಂದ್ರಪ್ಪ, ತಿಪ್ಪೇಸ್ವಾಮಿ, ಅನಿಲ್ ಕುಮಾರ್, ಲಿಂಗಮೂರ್ತಿ ಭಾಗವಹಿಸಿದ್ದರು. ತಮಟೆ ಬಡಿಯುವ ಮೂಲಕ ಪ್ರಧಾನಿ ಮೋದಿಯವರು ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿದರು.
ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿಯವರು ಮದಕರಿ ನಾಯಕ ಮತ್ತು ಒನಕೆ ಓಬವ್ವ ನಾಡಿನ ಜನತೆಗೆ ನನ್ನ ನಮಸ್ಕಾರಗಳು ಎಂದರು. ಈ ಸಮಾವೇಶಕ್ಕೆ ಇಷ್ಟೋಂದು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವುದು ಗಮನಿಸಿದರೆ, ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯುವ ಲಕ್ಷಣ ಇದಾಗಿದೆ ಎಂದು ಹೇಳಿದರು.
ದಿವಂಗತ ಮುಖ್ಯಮಂತ್ರಿ ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ. ನನಗೆ ೯೦ಕ್ಕೂ ಹೆಚ್ಚು ಬಾರಿ ನಿಂದನೆ ಮಾಡಿರುವ ಕಾಂಗ್ರೆಸ್ ಸಮಾಜದಲ್ಲಿ ಆತಂಕ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ದೇಶದಲ್ಲಿ ಕಾಂಗ್ರೆಸ್ ಆಯಸ್ಸು ಮುಗಿದಿದೆ. ಕಾಂಗ್ರೆಸ್ ವಾರಂಟಿ ಇಲ್ಲದ ಗ್ಯಾರಂಟಿ ಕಾರ್ಡ್ ಸುಳ್ಳಿನ ಕಂತೆಯಾಗಿದೆ. ಹೀಗಾಗಿ ದೇಶದಲ್ಲಿ ಕಾಂಗ್ರೆಸ್‌ನ ಆಯಸ್ಸು ಮುಗಿದಿದೆ ೨೦೧೨ರಲ್ಲೂ ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಸುಳ್ಳಿನ ಗ್ಯಾರಂಟಿ ನೀಡಿತ್ತು. ಆದರೆ ಕಾಂಗ್ರೆಸ್‌ನ ವಾರಂಟಿ ಮುಕ್ತಾಯವಾಗಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೇಸ್ ಹಾಗೂ ಜೆಡಿಎಸ್ ಉದ್ದೇಶ ಆತಂಕವಾದಿಗಳನ್ನು ತುಷ್ಟೀಕರಣ ಮಾಡುವುದಾಗಿದೆ. ಇದನ್ನು ಸದೆ ಬಡೆದು ಬಿಜೆಪಿ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿ, ಎಲ್ಲಾರ ಏಳಿಗೆಗಾಗಿ ದುಡಿಯುತ್ತಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಮುಂದಾಗಬೇಕು ಎಂದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು.
ರಾಜ್ಯ ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೋದಿ ಚಿತ್ರದುರ್ಗದ ಏಳು ಕೋಟೆಯಂತೆ ಏಳು ಸುರಕ್ಷಾ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಪಿಎಂ ಅವಾಸ್ ಯೋಜನೆ, ಅನಿಲ, ನೀರು, ಪ್ರತಿಮನೆಗೂ ರೇಷನ್, ಆಯುಷ್ಮಾನ್ ಭಾರತ ಯೋಜನೆ, ಮುದ್ರಾ, ಭೀಮಾ ಯೋಜನೆ, ಮಹಿಳೆಯರಿಗೆ ಸುರಕ್ಷೆ ಹಾಗೂ ಜನ್‌ಧನ್ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಎಸ್‌ಸಿ, ಎಸ್‌ಟಿ ಮಕ್ಕಳಿಗೆ ಮತ್ತು ಒಬಿಸಿ ಸಮುದಾಯಕ್ಕೆ ಡಬಲ್ ಇಂಜಿನ್ ಸರ್ಕಾರ ಅನೇಕ ಯೋಜನೆಗಳನ್ನು ನೀಡಿದ್ದೇವೆ. ಆದಿವಾಸಿ, ಬಂಜಾರ, ಲಂಬಾಣಿ ಸಮುದಾಯದವರಿಗೆ ಹಕ್ಕುಪತ್ರ ನೀಡಿ, ಭೂಮಿ ಇಲ್ಲದವರಿಗೆ ಭೂಮಿ ನೀಡಿದ್ದೇವೆ. ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇವೆ ಎಂದು ಹೇಳಿದರು.
ಡಬಲ್ ಇಂಜಿನ್ ಸರ್ಕಾರದ ಸಾಧನೆಗಳನ್ನು ಪ್ರತಿಯೊಂದು ಮನೆ ಮೆನಗೂ ತೆರಳಿ ಮೇ ೧೦ ರಂದು ನಡೆಯುವ ಮತದಾನದಲ್ಲಿ ಬಿಜೆಪಿ ಗುರುತಿಗೆ ಮತ ಹಾಕಿ ಪಕ್ಷವನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ ನೆರೆದಿದ್ದ ಜನಸ್ತೋಮಕ್ಕೆ ಕರೆ ನೀಡಿದರು.