ಕೈಗೆ ಅಧಿಕಾರ, ಸಿಕ್ಕರೆ ವರ್ಷಕ್ಕೊಬ್ಬರು ಪ್ರಧಾನಿ

ಕೊಲ್ಲಾಪುರ,ಏ.೨೮- ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ೫ ವರ್ಷಗಳಲ್ಲಿ ಐದು ಪ್ರಧಾನ ಮಂತ್ರಿಗಳನ್ನು ಆಯ್ಕೆ ಮಾಡುವ ಗುರಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಮೈತ್ರಿಕೂಟದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಎರಡನೇ ಹಂತದ ಚುನಾವಣೆ ಮುಗಿದ ಬಳಿಕ ಎನ್‌ಡಿಎ ೨-೦ ಮುನ್ನಡೆ ಸಾಧಿಸಿದ್ದು, ಭಾರತ ವಿರೋಧಿ ನೀತಿಗಳು ಮತ್ತು ದ್ವೇಷದ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್ ಮೈತ್ರಿಕೂಟ ಮತದಾನ ನಡೆದಿರುವ ಎರಡೂ ಹಂತದಲ್ಲಿ ಸೋಲು ಕಂಡಿದೆ ಎಂದಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಚುನಾವಣಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಕೇಂದ್ರದಲ್ಲಿ ಅಧಿಕಾರ ಹಿಡಿಯುವ ತವಕದಲ್ಲಿರುವ ಇಂಡಿಯಾ ಮೈತ್ರಿಕೂಟದ ೫ ವರ್ಷಗಳಲ್ಲಿ ೫ ಪ್ರಧಾನ ಮಂತ್ರಿಗಳನ್ನು ನೇಮಕ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ “ಪ್ರತಿಪಕ್ಷಗಳ ಬಣ ಮೂರು-ಅಂಕಿ ತಲುಪಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅವರಿಗೆ ಕೇಂದ್ರದಲ್ಲಿ ಸರ್ಕಾರ ನಡೆಸಲು ಅವಕಾಶ ಸಿಕ್ಕರೆ ಪ್ರತಿ ವರ್ಷ ಒಬ್ಬೊಬ್ಬರು ಪ್ರಧಾನಿ ಮಾಡ್ತಾರೆ ಎಂದು ಹರಿಹಾಯ್ದಿದ್ದಾರೆ.

ಕರ್ನಾಟಕದ ಮಾದರಿ
“ಕರ್ನಾಟಕದಲ್ಲಿ ಕಾಂಗ್ರೆಸ್ ೨.೫ ವರ್ಷಗಳ ನಂತರ ಉಪಮುಖ್ಯಮಂತ್ರಿಗೆ ಮುಖ್ಯಮಂತ್ರಿ ಹುದ್ದೆ ಹಸ್ತಾಂತರ ಮಾಡಲು ಯೋಜಿಸಿದ್ದಾರೆ. ಛತ್ತೀಸ್‌ಘಢ ಮತ್ತು ರಾಜಸ್ಥಾನದಲ್ಲೂ ಈ ವ್ಯವಸ್ಥೆ ಹೊಂದಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
“ಕರ್ನಾಟಕ ಮಾದರಿಯಲ್ಲಿ ಮುಸ್ಲಿಮರನ್ನು ಒಬಿಸಿಗಳಿಗೆ ೨೭ ಪ್ರತಿಶತ ಕೋಟಾದಲ್ಲಿ ಸೇರಿಸಿಕೊಳ್ಳಲಾಗಿದೆ” ಅದನ್ನು ದೇಶದಲ್ಲಿ ವಿಸ್ತರಿಸಲು ಬಯಸಿದ್ದಾರೆ “ಕಾಂಗ್ರೆಸ್ ನೇತೃತ್ವದ ಮೈತ್ರಿ ಸಾಮಾಜಿಕ ನ್ಯಾಯದ ಕೊಲೆಗೆ ಪಣ ತೊಟ್ಟಿದೆ. ಕಾಂಗ್ರೆಸ್ ಸಂವಿಧಾನವನ್ನು ಬದಲಿಸಲು ಮತ್ತು ದಲಿತರು, ಓಬಿಸಿಗಳಿಗೆ ಧರ್ಮಾಧಾರಿತ ಮೀಸಲಾತಿಗಾಗಿ ಕೋಟಾ ಪ್ರಯೋಜನಗಳನ್ನು ದೋಚಲು ಬಯಸಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕೆಳಮಟ್ಟಕ್ಕೆ ಇಳಿದಿದೆ ಎಂದು ಆರೋಪಿಸಿದ ಅವರು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ವಿಷಯವನ್ನು ನಿರಾಕರಿಸಿದ್ದಾರೆ ಎಂದರು.