ಕೈಗಾರಿಕೋದ್ಯಮಿಗಳ ಕುಂದುಕೊರತೆಗಳನ್ನು ಪ್ರಥಮಾದ್ಯತೆ ಮೇಲೆ‌ ನಿವಾರಿಸಿ

ಕಲಬುರಗಿ,ಜು.11: ಜಿಲ್ಲೆಯ ಕೈಗಾರಿಕ್ಯೋದ್ಯಮಿಗಳ ಕುಂದುಕೊರತೆಗಳನ್ನು ಪ್ರಥಮಾದ್ಯತೆ ಮೇಲೆ ನಿವಾರಿಸಬೇಕು ಮತ್ತು ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಮಂಗಳವಾರ ಇಲ್ಲಿನ‌ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೈಗಾರಿಕೆ ಇಲಾಖೆ, ಕೆ.ಐ.ಎ.ಡಿ.ಬಿ, ಪರಿಸರ‌ ಮಾಲಿನ್ಯ ನಿಯಂತ್ರಣ ಮಂಡಳಿ, ಕೆ.ಎಸ್.ಎಸ್.ಐ.ಡಿ.ಸಿ ಅಧಿಕಾರಿಗಳೊಂದಿಗೆ ಇಲಾಖಾವಾರು ಪ್ರಗತಿ ಪರಿಶೀಲನೆ‌ ನಡೆಸಿದ ಅವರು, ಒಟ್ಟಿನಲ್ಲಿ ಉದ್ದಿಮೆದಾರರಿಂದ ಯಾವುದೇ ದೂರು ಬಾರದಂತೆ ಕೈಗಾರಿಕೆ ಇಲಾಖೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕೈಗಾರಿಕೋದ್ಯಮಿಗಳಿಗೆ ಇಲಾಖೆಯ ಕೈಗಾರಿಕಾ ನೀತಿ, ಯೋಜನೆಗಳ ಬಗ್ಗೆ ಅರಿವು‌ ಮೂಡಿಸಬೇಕು. ನವೀನ‌ ಕಲ್ಪನೆಗಳನ್ನು ಹೊಂದಿರುವ ನವೋದ್ಯಮಿಗಳಿಗೆ ಪ್ರೊತ್ಸಾಹಿಸಬೇಕು‌ ಎಂದ‌ ಜಿಲ್ಲಾಧಿಕಾರಿಗಳು, ಸರ್ಕಾರದ ಮಟ್ಟದಲ್ಲಿ ಜಿಲ್ಲೆಯ ಪ್ರಸ್ತಾವನೆಗಳ ಬಾಕಿ ಇರುವ ಬಗ್ಗೆ ತಿಳಿಸಿದಲ್ಲಿ ಅದನ್ನು ಬಗೆಹರಿಸಲಾಗುವುದು ಎಂದು ಡಿ.ಐ.ಸಿ. ಜಂಟಿ ನಿರ್ದೇಶಕ‌ ಬಿ.ಸತೀಷಕುಮಾರ ಅವರಿಗೆ ಸೂಚಿಸಿದರು.

ಕಪನೂರ 3ನೇ‌ ಹಂತದ ಕೈಗಾರಿಕಾ ಪ್ರದೇಶಕ್ಕೆ ಗುರುತಿಸಿದ‌ 605 ಎಕರೆ‌ ಜಮೀನು ಭೂಸ್ವಾಧೀನಕ್ಕೆ ಈಗಾಗಲೆ‌ ದರ‌ ನಿಗದಿ ಮಾಡಿದ್ದು, ಇದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಲು ಕೋರಿ ಕೂಡಲೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಭೆಯಲ್ಲಿದ್ದ ಕೆ.ಐ.ಎ.ಡಿ.ಬಿ ವಿಶೇಷ ಭೂಸ್ವಾಧೀನಾಧಿಕಾರಿ ಪಾರ್ವತಿ ಅವರಿಗೆ ಡಿ.ಸಿ. ಸೂಚಿಸಿದರು.

ಸಭೆಯಲ್ಲಿ‌ ಪ್ರೊಬೇಷನರ್ ಐ.ಎ.ಎಸ್.ಅಧಿಕಾರಿ ಗಜಾನನ್ ಬಾಳೆ, ಕೆ.ಎಸ್.ಎಸ್.ಐ.ಡಿ.ಸಿ ಸಹಾಯಕ ಜನರಲ್‌ ಮ್ಯಾನೇಜರ್ ದಿನೇಶ ಆರ್. ಜವಳೆ, ಪ್ರಾದೇಶಿಕ ಪರಿಸರ ಅಧಿಕಾರಿ ಮಂಜಪ್ಪ, ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕ ಅಬ್ದುಲ್ ಅಜೀಮ್, ಕೈಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮುಕುಂದರೆಡ್ಡಿ ಪಾಟೀಲ, ಶಿವಮ್ಮ ಸೇರಿದಂತೆ ತಾಲೂಕಾ ವಿಸ್ತರಣಾಧಿಕಾರಿಗಳು ಇದ್ದರು.