
ಮುದ್ದೇಬಿಹಾಳ: ಮಾ.4:ಬಸರಕೋಡ ಭಾಗವು ಪ್ರಾಕೃತಿಕವಾಗಿ ಸಂಪದ್ಭರಿತವಾಗಿದೆ. ಇಲ್ಲಿ ಕೈಗಾರಿಕೆ ಸ್ಥಾಪಿಸಲು ಹೇರಳ ಅವಕಾಶಗಳಿವೆ. ಈಗಾಗಲೇ ಈ ಭಾಗದಲ್ಲಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಕೈಗಾರಿಕೆ, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಇದಕ್ಕೆ ಜನರ ಸಹಕಾರ ಬಹಳ ಮುಖ್ಯವಾಗಿದೆ ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಗೋನಾಳ, ಬಸರಕೋಡ, ರೂಢಗಿ ಗ್ರಾಮಗಳಲ್ಲಿ 45 ಕೋಟಿಗೂ ಅಧಿಕ ಅನುದಾನ ಸಿಸಿ ರಸ್ತೆ, ಸಂಪರ್ಕ ರಸ್ತೆ ಸೇರಿ ಮೂಲ ಸೌಕರ್ಯ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಸರಕೋಡದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ರಸ್ತೆಗಳು ಉತ್ತಮವಾಗಿದ್ದರೆ ಉಳಿದೆಲ್ಲವರೂ ಸರಾಗವಾಗಿ ನಡೆಯುತ್ತವೆ. ಇದನ್ನು ಮನಗಂಡು ಮೊದಲ ಹಂತದಲ್ಲಿ ರಸ್ತೆಗಳ ಅಭಿವೃದ್ದಿಗೆ ಆದ್ಯತೆ ನೀಡಿದ್ದೇನೆ. ಇದುವರೆಗೆ 65 ಕೋಟಿ ಅನುದಾನದಲ್ಲಿ ಬಸರಕೋಡ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಗಳು ಸೇರಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಮ ಕೈಕೊಂಡಿದ್ದೇನೆ. 158 ಕೋಟಿ ಅನುದಾನದಲ್ಲಿ 220 ಕೆವಿ ವಿದ್ಯುತ್ ಸ್ಟೇಷನ್ ಸ್ಥಾಪನೆಗೆ ಸರ್ಕಾರ ಮಂಜೂರಾತಿ ಕೊಟ್ಟಿದೆ. ಈ ಭಾಗದಲ್ಲಿ ಕೈಗಾರಿಕೆ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. 85 ಕೋಟಿ ಅನುದಾನದಲ್ಲಿ ಪ್ರಮುಖ ನೀರಾವರಿ ಕಾಮಗಾರಿಗಳಿಗೆ ಟೆಂಡರ್ ಆಗಿದ್ದು ಶೀಘ್ರ ಕೆಲಸ ಪ್ರಾರಂಭಗೊಳ್ಳಲಿದೆ ಎಂದರು.
ಬಸರಕೋಡ ಭಾಗದಲ್ಲಿನ 400 ಎಕರೆ ಸರ್ಕಾರಿ ಗುಡ್ಡದ ಜಮೀನನ್ನು ಕೆಲವರು ತಮ್ಮದು ಎಂದು ಅಕ್ರಮವಾಗಿ ಹಿಡಿದಿಟ್ಟುಕೊಂಡಿದ್ದರು. ದಾಖಲೆ ಸಮೇತ ಆ ಜಮೀನನ್ನು ಮರಳಿ ಸರ್ಕಾರಕ್ಕೆ ಹಸ್ತಾಂತರಿಸಲು ಕ್ರಮ ಕೈಕೊಂಡು ಸರ್ಕಾರಿ ಭೂಮಿ ಉಳಿಸಿದ್ದೇನೆ. ಬಸರಕೋಡದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದ ಅಭಿವೃದ್ದಿಗೆ ನಾನು ಹೆಮ್ಮೆ ಪಡುತ್ತೇನೆ. ಈ ಊರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸ್ಯಾಂಕ್ಷನ್ ಮಾಡಿಸಿ ಅದಕ್ಕೆ ಜಾಗವನ್ನೂ ಕೊಟ್ಟಿದ್ದೇನೆ. ನಮ್ಮ ಸರ್ಕಾರದಲ್ಲಿ 1.5 ಕೋಟಿ ಅನುದಾನ ಸ್ಯಾಂಕ್ಷನ್ ಮಾಡಿಸಿ ಹೊಸ ಕಾಲೇಜು ಕಟ್ಟಡ ಮಾಡಿಸಿದ್ದೇನೆ. ಹೊಸ ಪಶು ಚಿಕಿತ್ಸಾಲಯ ಕಟ್ಟಡವೂ ನಿರ್ಮಾಣಗೊಂಡಿದೆ. ಈ ಭಾಗದಲ್ಲೆಲ್ಲ ಸಾಕಷ್ಟು ಅಭಿವೃದ್ದಿ ಕಣ್ಣಿಗೆ ಕಾಣುಸುವಂತಿದೆ ಎಂದರು.
ಅಪ್ಪು ಬಿರಾದಾರ ಅವರು ಮಾತನಾಡಿ ಶಾಸಕ ನಡಹಳ್ಳಿಯವರದ್ದು ಅಭಿವೃದ್ದಿ ಗುರಿ ಒಂದೇ ಮುಂದಿರುವುದು. ತಾಲೂಕಿನ ಸಮಗ್ರ ಅಭಿವೃದ್ಧಿಯ ಏಕೈಕ ಉದ್ದೇಶ ಅವರಲ್ಲಿದೆ. ಮೂರುವರೆ ವರ್ಷದ ಅಧಿಕಾರದಲ್ಲಿ ತಾಲೂಕಿನ ಪ್ರತಿ ಗ್ರಾಮದಲ್ಲೂ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗಿವೆ ಅನ್ನೋದಕ್ಕೆ ಜನರೇ ಸಾಕ್ಷಿಯಾಗಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇರುವಂಥ ಶಾಸಕ ನಡಹಳ್ಳಿಯವರು ನಾಗರಬೆಟ್ಟದ ಆಕ್ಸಫರ್ಡ್ ಕಾಲೇಜಿನ ವಿದ್ಯಾರ್ಥಿಗಳ ಮೆಡಿಕಲ್ ಶಿಕ್ಷಣಕ್ಕೆ ತಲಾ 50000 ನೆರವನ್ನು ವೇದಿಕೆಯಲ್ಲೇ ಕೊಟ್ಟಂಥವರು. ಒಬ್ಬ ವ್ಯಕ್ತಿಗೆ ಅಧಿಕಾರ ಕೊಟ್ಟರೆ ಏನೆಲ್ಲ ಮಾಡಲು ಸಾಧ್ಯ ಅನ್ನೋದಕ್ಕೆ ನಡಹಳ್ಳಿಯವರು ಉದಾಹರಣೆಯಾಗಿದ್ದಾರೆ. ಬಸರಕೋಡದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದ ಅಭಿವೃದ್ದಿಯಲ್ಲಿ ಶಾಸಕರ ಶ್ರಮ ಬಹಳಷ್ಟಿದೆ. ಈ ಭಾಗದಲ್ಲಿ ಉತ್ತಮ ರಸ್ತೆ ಮತ್ತು ಉದ್ಯೋಗ ಸೌಲಭ್ಯ ಒದಗಿಸಿ ಕೊಡಲು ಈಗಾಗಲೇ ಕ್ರಮ ಕೈಕೊಂಡಿದ್ದಾರೆ. ಅವರೊಬ್ಬ ಕ್ರಿಯಾಶೀಲ ಶಾಸಕರಾಗಿದ್ದು ಸದಾ ಅಭಿವೃದ್ಧಿ ಮಂತ್ರವನ್ನು ಜಪಿಸುವಂಥವರಾಗಿದ್ದಾರೆ. ಮುಂಬರುವ ದಿನಗಳಲ್ಲಿ ನಮ್ಮ ಜನತೆ ಇವರನ್ನೇ ಮತ್ತೊಮ್ಮೆ ಬೆಂಬಲಿಸುವ ವಿಶ್ವಾಸ ನಮಗಿದೆ ಎಂದರು.
ಬಸರಕೋಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಕೆ.ವೈ.ಬಿರಾದಾರ, ಸಿದ್ದು ಮೇಟಿ, ಶರಣು ಮೇಟಿ, ರಾಜು ಮೇಟಿ, ಬಿ.ಪಿ.ಯಾಳವಾರ, ಶರಣಪ್ಪ ಕೊಣ್ಣೂರ, ತಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ ಚಲವಾದಿ, ಶ್ರೀಶೈಲ ದೊಡಮನಿ, ಬಸವರಾಜ ಚಿತ್ತರಗಿ, ಬಸವರಾಜ ಮಂಕಣಿ, ಇಂಜಿನೀಯರ್ ಅಶೋಕ ಬಿರಾದಾರ, ಯಮನಪ್ಪ ಮಾದರ, ಚಂದಪ್ಪ ಚಲವಾದಿ, ನಿಜಲಿಂಗಪ್ಪ ಮಾದರ, ಬಸಪ್ಪ ಸಜ್ಜ, ಬಾಬು ಕೊಣ್ಣೂರ, ಪ್ರಕಾಶ ಬಿರಾದಾರ, ಅಪ್ಪುಗೌಡ ಮೈಲೇಶ್ವರ, ಮತ್ತು ಆಯಾ ಗ್ರಾಮಗಳಲ್ಲಿ ಆಯಾ ಗ್ರಾಮಗಳ ಪ್ರಮುಖರು, ಸಾರ್ವಜನಿಕರು ಪಾಲ್ಗೊಂಡಿದ್ದರು.